ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಹತ್ತನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅಥಣಿ ಎಸ್.ವೀರಣ್ಣ ಮತ್ತು ವಿಜಾಪುರ ಜಿಲ್ಲೆಯ ಟಿ.ಎಂ. ಚಂದ್ರಶೇಖಯ್ಯ ಅವರಿಗೆ ಐದು ದಶಕಗಳ ಕಾಲ ವಿದ್ಯಾದಾನ, ದಾಸೋಹ ಸೇರಿದಂತೆ ಇತರೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಹಾಗೂ ಶಿಕ್ಷಣ, ಸಾಮಾಜಿಕ ಹಾಗೂ ಪತ್ರಿಕೋದ್ಯಮದ ಸಾಧನೆ ಗುರುತಿಸಿ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ದಿವಂಗತ ಎಂ.ಎಸ್. ಶಿವಣ್ಣ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಎಂ.ಎಸ್. ಶಿವಣ್ಣ ಅವರ ಬದಲಿಗೆ ಅವರ ಪತ್ನಿ ಸಿದ್ದಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟೀನ್ ಡಿಸೌಜಾ ಇವರಿಗೆ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಘಟಿಕೋತ್ಸವದಲ್ಲಿ ಸ್ನಾತಕ ಪದವಿಯ ೧೪ ವಿದ್ಯಾರ್ಥಿಗಳು ೨೧ ಸ್ವರ್ಣದ ಪದಕ ಪಡೆದರೆ, ಸ್ನಾತಕೋತ್ತರ ಪದವಿಯ ೩೧ ವಿದ್ಯಾರ್ಥಿಗಳು ೫೯ ಚಿನ್ನದ ಪದಕ ಪಡೆದರು. ಒಟ್ಟು ೧೪ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿಯನ್ನು ಮತ್ತು ಒಬ್ಬರು ಎಂ.ಫಿಲ್ ಪದವಿ ಪ್ರಮಾಣ ಪತ್ರವನ್ನು ರಾಜ್ಯಪಾಲರಿಂದ ಸ್ವೀಕರಿಸಿದರು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಬಿ.ಹಾಲಮ್ಮ ಮತ್ತು ಜೀವರಸಾಯನಶಾಸ್ತ್ರ ವಿಭಾಗದ ಕೆ.ಅರುಣ್ ಶರ್ಮ ತಲಾ ಐದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದು, ೪೫ ರ‍್ಯಾಂಕ್ ವಿದ್ಯಾರ್ಥಿಗಳಿಗೆ ೮೧ ಚಿನ್ನದ ಪದಕ ಪಡೆದರು.
ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಟ್ಟು ೧೨೯ ಕಾಲೇಜುಗಳಲ್ಲಿ ಅಧ್ಯಯನ ಮಾಡಿದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ ಒಟ್ಟು ೧೩,೯೭೮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಜೊತೆಗೆ ಒಬ್ಬರು ಎಂ.ಫಿಲ್ ಹಾಗೂ ೧೪ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿಯನ್ನು ಪಡೆದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಅವರು ಘಟಿಕೋತ್ಸವ ಭಾಷಣ ಮಾಡಿದರು, ವಿವಿ ಕುಲಪತಿ ಪ್ರೊ. ಡಾ. ಬಿ.ಡಿ. ಕುಂಬಾರ್, ಕುಲಸಚಿವ ಡಾ. ಶಿವಶಂಕರ, ಕುಲಸಚಿವೆ ಸರೋಜ ಉಪಸ್ಥಿತರಿದ್ದರು.