ದಾವಣಗೆರೆ ಕಾಂಗ್ರೆಸ್ ಟಿಕೆಟ್‌ ಯಾರಿಗೆ?

ಕಾಂಗ್ರೆಸ್‌
Advertisement

ದಾವಣಗೆರೆ: ಪ್ರತಿಷ್ಠೆಯಾಗಿ ಸ್ವೀಕರಿಸುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಅಳೆದು ತೂಗಿ ಟಿಕೆಟ್ ನೀಡಲು ನಿರ್ಧರಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವಿನಯ್ ಕುಮಾರ್ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಸೊಸೆ , ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಡಾ.ಪ್ರಭಾ ಮಲ್ಲಿಕಾರ್ಜುನ್ ಇಲ್ಲವೇ ವಿನಯ್ ಕುಮಾರ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಖಚಿತ ಎಂದು ದೆಹಲಿಯ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿನಯ್ ಕುಮಾರ್ ಪರ ಒಲವು ಇದೆ. ಸಿದ್ದರಾಮಯ್ಯ ಅವರು ಕೊಪ್ಪಳ, ಮೈಸೂರು ಹಾಗೂ ದಾವಣಗೆರೆಯಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂಬ ಮನವಿಯನ್ನು ಹೈಕಮಾಂಡ್‌ಗೆ ಮಾಡಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ಅವರ ಆಶೀರ್ವಾದ ಸಿಕ್ಕರೆ, ಅಹಿಂದ ಮತ ಕಾಂಗ್ರೆಸ್‌ಗೆಗೆ ಬಿದ್ದರೆ ವಿನಯ್ ಕುಮಾರ್ ಗೆಲುವು ಕಷ್ಟವಾಗದು.
ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಮಾಜ ಸೇವೆ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಜನರೊಟ್ಟಿಗೆ ಬೆರೆಯುವ ರೀತಿ, ಬಡವರಿಗೆ ಸಹಾಯ, ಎಸ್.ಎಸ್.ಕೇರ್ ಟ್ರಸ್ಟ್‌ನಡಿ ಸಾವಿರಾರು ಜನರಿಗೆ ಆರೋಗ್ಯ ದಾಸೋಹ ಸೇರಿದಂತೆ ಎಲ್ಲರನ್ನೂ ಗಮನ ಸೆಳೆಯುತ್ತಿರುವ ನಾಯಕಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. ಮಾವ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪನವರು ಬಿರುಸಿನ ಪ್ರಚಾರ ನಡೆಸಿದರೆ ಈ ಬಾರಿ ಬಿಜೆಪಿ ಮಣ್ಣು ಮುಕ್ಕಿಸಬಹುದು ಎಂಬ ಲೆಕ್ಕಾಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ. ಒಟ್ಟಾರೆ ಲೋಕಸಭಾ ಕ್ಷೇತ್ರದ ಇತಿಹಾಸ ಗಮನಿಸಿದರೆ ಆರು ಬಾರಿ ಕಾಂಗ್ರೆಸ್ ಹಾಗೂ ಆರು ಬಾರಿ ಬಿಜೆಪಿ ಗೆದ್ದಿದೆ. ಆದರೆ ಈ ಬಾರಿ ಗೆಲ್ಲುತ್ತಾರೆ ಎಂಬುದೇ ಕದನ ಕುತೂಹಲ.