ದಾವಣಗೆರೆಯಲ್ಲಿ ಮಳೆ : ಕೊಚ್ಚಿ ಹೋದ ಭದ್ರಾ ನಾಲೆ

Advertisement


ದಾವಣಗೆರೆ : ಜಿಲ್ಲೆಯಲ್ಲಿ ಮಳೆಯ ಅರ್ಭಟಕ್ಕೆ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದೆ. ನೀರಿನ ರಭಸಕ್ಕೆ ಭದ್ರಾ ನಾಲೆ ಕೊಚ್ಚಿ ಹೋಗಿದೆ. ಇದರಿಂದ ತೋಟಗಳು ಜಲಾವೃತಗೊಂಡಿವೆ. ಶನಿವಾರ ರಾತ್ರಿ 10 ಗಂಟೆಗೆ ಸುರಿದ ಮಳೆಯು ಜನ ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಎರಡು ದಿನಗಳಿಂದ ದಾವಣಗೆರೆ ಸೇರದಂತೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ನಿರಂತರ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಹೆಬ್ಬಾಳು ಕೆರೆ ಭರ್ತಿಯಾಗಿ ನಾಲ್ಕನೇ ಬಾರಿ ಕೋಡಿ ಬಿದ್ದಿದೆ. ದಾವಣಗೆರೆ ತಾಲ್ಲೂಕಿನ ನಲ್ಕುಂದ ಗ್ರಾಮದ ಬಳಿ ನೀರಿನ ರಭಸಕ್ಕೆ ಭದ್ರಾ ನಾಲೆ ಕೊಚ್ಚಿ ಹೋಗಿದ್ದು ಅಕ್ಕ-ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ದಾವಣಗೆರೆಯ ಬಾಡಾಕ್ರಾಸ್‌ನ ಜಿ.ಎಂ. ಕ್ಯಾಪ್ ನಲ್ಲಿ ಮಳೆಯಿಂದಾಗಿ ಒಂದು ಮನೆ ಕುಸಿದಿದ್ದು, ನೀರು ನೂರಾರು ಮನೆಗಳ ಒಳಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಹಾಳಾಗಿವೆ. ಕೆಲವಡೆ ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಲೇಔಟ್‌ನಲ್ಲಿ ನೀರು ನುಗ್ಗಿದ ಪರಿಣಾಮ ಪೊಲೀಸರು ಮತ್ತು ಅಧಿಕಾರಿಗಳು ಪರದಾಡುವಂಥ ಸ್ಥಿತಿ ಉಂಟಾಗಿದೆ.