ದಾರಿದ್ರ್ಯ ನಿವಾರಣೆಗೆ ದಾನವೇ ದಿವ್ಯೌಷಧ

Advertisement

ದಾನ ಮಾಡದವ ಆಗರ್ಭ ಸಿರಿವಂತನಾದರೂ, ಅವನ ಸಂಪತ್ತು ಮುಂದೆ ಅವನಿಗೆ ಉಪಯೋಗಕ್ಕೆ ಬಾರದು. ಅವನು ಮುಂದಿನ ಜನ್ಮದಲ್ಲಿ ಬಡವನಾಗಿ ಬಡತನದ ಬವಣೆಯನ್ನು ಅನುಭವಿಸುವುದು ಅವನ ಪಾಲಿಗೆ ಅನಿವಾರ್ಯವಾಗುತ್ತದೆ.
“ಅದತ್ತದೋಷೇಣ ಭವೇದ್ ದರಿದ್ರಃ
ದಾರಿದ್ರ‍್ಯದೋಷೇಣ ಕರೋತಿ ಪಾಪಂ |
ಪಾಪಾದವಶ್ಯಂ ನರಕಂ ಪ್ರಯಾತಿ
ಪುನರ್ದರಿದ್ರೋ ಪುನರೇವ ಪಾಪಿ ||”

ಇದು ಸುಭಾಷಿತಕಾರನ ಸಂದೇಶ, ತಾತ್ಪರ್ಯವೇನೆಂದರೆ-ದಾನ ಮಾಡಲಾರದ ದೋಷದಿಂದ ಮನುಷ್ಯ ದರಿದ್ರ(ಬಡವ)ನಾಗುತ್ತಾನೆ. ಬಡತನದ ಬವಣೆಯನ್ನು ತಾಳದೆ ಪಾಪಕ್ಕಿಳಿಯುತ್ತಾನೆ. ಪಾಪಿ ದರಿದ್ರನಾಗುತ್ತ, ದರಿದ್ರ ಪಾಪಿಯಾಗುತ್ತಾ ನಿರಂತರ ದುಃಖದಲ್ಲಿ ಭಾಗಿಯಾಗುವನು. ಈ ದಾರಿದ್ರ ಮತ್ತು ಪಾಪಗಳ ನಿವಾರಣೆಗೆ ದಾನವೇ ದಿವೌಷಧ, ನಾವು ನೀಡಿದ ದಾನ ಈ ಜನ್ಮದಲ್ಲಿ ಇನ್ನೊಂದು ಜೀವಿಯ ಸಂತೋಷಕ್ಕೆ ಕಾರಣವಾಗುತ್ತದೆ. ಮುಂದಿನ ಜನ್ಮದಲ್ಲಿ ನಮ್ಮ ಸಂತೋಷಕ್ಕೆ ಕಾರಣವಾಗುತ್ತದೆ. ಈ ಪ್ರಸಂಗದಲ್ಲಿ ಸರ್ವಜ್ಞ ಕವಿಯ
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟದ್ದು ಕೆಟ್ಟಿತನಬೇಡ ಮುಂದೆ
ಕಟ್ಟಿಹುದು ಬುತ್ತಿ ಸರ್ವಜ್ಞ

ಈ ಮಾತು ಸ್ಮರಣೀಯವಾದುದು. ಇದನ್ನರಿಯದೇ ಕೇವಲ ಗಳಿಸಿ ಉಳಿಸುವುದರಲ್ಲೇ ವೇಳೆಯನ್ನು ಕಳೆಯುವವನ ಬಾಳು ದುಃಖಮಯ ವಾಗುವುದರಲ್ಲಿ ಸಂದೇಹವಿಲ್ಲ. ಹೀಗೆ ಯಾರಿಗೂ ನೀಡದೆ ತಾನೂ ಉಪಯೋಗಿಸದೆ ಧನಮೋಹಿಗಿಂತಲೂ ಯಾವುದಾದರೊಂದು ಉದ್ದೇಶವನ್ನಿರಿಸಿಕೊಂಡು ಅದನ್ನು ಪ್ರಾಪ್ತಮಾಡಿಕೊಳ್ಳಬೇಕೆಂದೆನಿಸಿಯಾದರೂ ದಾನ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ. ದಾನ ಮಾಡುವದನ್ನೇ ರೂಢಿಸಿಕೊಳ್ಳಬೇಕಾದುದನ್ನು ನಿರೂಪಿಸುವುದಕ್ಕೋಸ್ಕರ ಸೋಪಾಧಿಕ ದಾನವನ್ನು ದಾನದ ವಿಭಾಗಗಳಲ್ಲೊಂದಾಗಿ ಅಂಗೀಕರಿಸಲಾಗಿದೆ. ಈ ದಾನದಿಂದ ಉಪಾಧಿಗಳಿಗಾಗಿ, ದಾನ ಮಾಡುವ ವಾಸನೆಗಳು ಕಂಡು ಬರುತ್ತವೆ. ಆದರೆ ಇದು ದಾನ ಮಾಡಲು ಮತ್ತು ಮಾಡುವ ಕಾರ್ಯ ಮಾದರಿಯಾಗಿರಲಿಕ್ಕೆ ಸಾಕು. ಆದರೆ ಇದೇ ದಾನ ಶ್ರೇಷ್ಠವೆನಿಸುವದಿಲ್ಲ. ಈ ಸೋಪಾಧಿಕ ದಾನಕ್ಕಿಂತ ಯಾವ ಅಪೇಕ್ಷೆಯನ್ನು ಪಡೆಯದೇ ನಿರುಪಾಧಿಕ ದಾನ ಮಾಡುವುದು ಶ್ರೇಷ್ಠ.