ದಲಿತ ಕೂಲಿ ಕಾರ್ಮಿಕರಿಗೆ ಗೃಹ ಬಂಧನ

ಚಿಕ್ಕಮಗಳೂರು
Advertisement

ಚಿಕ್ಕಮಗಳೂರು: ಮುಂಗಡ ಹಣ ಪಡೆದು ತೋಟದ ಕೆಲಸಕ್ಕೆ ಬಾರದೇ, ಬೇರೆಯವರ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿಕ್ಕೆ ಕೋಪಗೊಂಡ ಕಾಫಿ ತೋಟದ ಮಾಲಿಕ ಮುಂಗಡ ಹಣವನ್ನು ವಾಪಸ್ ನೀಡುವಂತೆ ಹಲ್ಲೆ ನಡೆಸಿಲ್ಲದೇ, ಕಾರ್ಮಿಕರನ್ನು ಗೃಹ ಬಂಧನದಲ್ಲಿರಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕು ಬಾಳೆಹೊನ್ನೂರು ಸಮೀಪದ ಜೇನು ಗದ್ದೆಯ ಪುರ ಗ್ರಾಮದಲ್ಲಿ ಈ ಪ್ರಸಂಗ ನಡೆದಿದೆ. ಜಗದೀಶ್‌ಗೌಡ ಮಾಲಿಕತ್ವದ ಕಾಫಿ ತೋಟದಲ್ಲಿ ಕಾರ್ಮಿಕ ಕುಟುಂಬವೊಂದು ಕೆಲಸ ಮಾಡುತ್ತಿತ್ತು. ಈ ಕಾರ್ಮಿಕರು ಬೇರೆಯವರ ಕಾಫಿತೋಟಕ್ಕೆ ಕೆಲಸಕ್ಕೆ ತೆರಳುತ್ತೇವೆಂದು ಜಗದೀಶ್‌ಗೌಡ ಅವರ ಬಳಿ ಕೇಳಿಕೊಂಡಿದ್ದಾರೆ.
ಈ ವೇಳೆ ಜಗದೀಶ್‌ಗೌಡ ತನ್ನಿಂದ ಪಡೆದಿರುವ ಮುಂಗಡ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಸ್ವಲ್ಪ ಸಮಯ ನೀಡಿ ನಿಮ್ಮಿಂದ ಪಡೆದಿರುವ ಮುಂಗಡ ಹಣವನ್ನು ವಾಪಸ್ ನೀಡಿ ಹೋಗುತ್ತೇವೆಂದು ಮನವಿ ಮಾಡಿದ್ದಾರೆ. ಈ ವೇಳೆ ಕೋಪಗೊಂಡ ಮಾಲಿಕ ಅವರ ಮೇಲೆ ಹಲ್ಲೆ ನಡೆಸಿದಲ್ಲದೆ ಅವರನ್ನು ಗೃಹ ಬಂಧನದಲ್ಲಿರಿಸಿದ್ದರು ಎಂದು ಕಾರ್ಮಿಕ ಕುಟುಂಬದವರು ಆರೋಪಿಸಿದ್ದಾರೆ.
ಜಗದೀಶ್‌ಗೌಡ ದಲಿತ ಕಾರ್ಮಿಕ ಕುಟುಂಬದವರ ಮೇಲೆ ದೌರ್ಜನ್ಯವೆಸಗಿದ್ದು, ಈ ವೇಳೆ ಕುಟುಂಬದವರು ಮೊಬೈಲ್‌ನಲ್ಲಿ ಘಟನೆ ಸೆರೆಹಿಡಿದಿದ್ದಾರೆ. ಇದನ್ನು ಗಮನಿಸಿದ ಮಾಲಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರ್ಮಿಕರಿಂದ ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ.
ಗರ್ಭಿಣಿ ಅರ್ಪಿತಾ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾನೆ. ಹಲ್ಲೆಗೊಳಗಾದ ಅರ್ಪಿತಾ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗದೀಶ್‌ಗೌಡ ಹಲ್ಲೆ ನಡೆಸಿದ್ದರಿಂದ ಅರ್ಪಿತಾಗೆ ಗರ್ಭಪಾತವಾಗಿದೆ ಎಂದು ಕುಟುಂಬದವರು ಆರೋಪಿಸಿದ್ದು, ತೋಟದ ಮಾಲಿಕನ ದೌರ್ಜನ್ಯಕ್ಕೆ ಒಳ ಗಾಗಿರುವ ತಮಗೆ ನ್ಯಾಯ ದೊರಕಿಸುವಂತೆ ಮನವಿ ಮಾಡಿದ್ದಾರೆ.