ಬೆಂಗಳೂರು: ಒಂದರ ಮೇಲೊಂದು ದರ ಏರಿಸುತ್ತಿರುವ ಸರ್ಕಾರ ಸಾರಿಗೆ ಬಸ್ ದರ ಹಾಗೂ ಕುಡಿಯುವ ನೀರಿನ ದರ ಹೆಚ್ಚಿಸಿ ಏರಿಕೆ ಬರೆ ನಿಲ್ಲಿಸುವಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಮೇಲೆ ದರ ಏರಿಕೆ ಬರೆ ನಿಲ್ಲಿಸುವಂತೆ ಕಾಣುತ್ತಿಲ್ಲ. ಅಕ್ರಮವಾಗಿ ಸ್ಟಾಲಿನ್ ನಾಡಿಗೆ ಕಾವೇರಿ ನೀರು ಹರಿಸಿ ಇದೀಗ ನಮ್ಮ ಜನರ ಕುಡಿಯುವ ನೀರಿನ ದರವನ್ನು ಶೇ.30 ರಿಂದ 40 ರಷ್ಟು ಹೆಚ್ಚಳ ಮಾಡಲು ಹೊರಟಿರುವ ನಿರ್ಧಾರ ಅತ್ಯಂತ ಖಂಡನೀಯ.
ಸರಣೀ ರೂಪದಲ್ಲಿ ಒಂದರ ಮೇಲೊಂದು ದರ ಏರಿಸುತ್ತಿರುವ ಸರ್ಕಾರ ಸಾರಿಗೆ ಬಸ್ ದರ ಹಾಗೂ ಕುಡಿಯುವ ನೀರಿನ ದರ ಹೆಚ್ಚಿಸಿ ಜನಸಾಮಾನ್ಯರ ಕಿಸೆ ಬರಿದು ಮಾಡಿ ಬರಿದಾಗಿರುವ ತನ್ನ ಖಜಾನೆ ತುಂಬಿಸಿಕೊಳ್ಳಲು ಹೊರಟಿದೆ. ವಾಲ್ಮೀಕಿ ನಿಗಮದ ಹಗರಣದಂತೆ ಖಜಾನೆ ಲೂಟಿಯೊಂದೇ ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ. ಕುಡಿಯುವ ನೀರಿನ ದರ ಏರಿಕೆ ನಿರ್ಧಾರದ ಜಲಮಂಡಳಿ ಪ್ರಸ್ತಾವನೆಯನ್ನು ಸರ್ಕಾರ ಯಥಾವತ್ ತಿರಸ್ಕರಿಸುವಂತೆ ಕರ್ನಾಟಕ ಬಿಜೆಪಿ ಒತ್ತಾಯಿಸುತ್ತದೆ ಎಂದಿದ್ದಾರೆ.