ಹುಬ್ಬಳ್ಳಿ : ಭೈರಿದೇವರಕೊಪ್ಪದಲ್ಲಿರುವ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಬಿಜೆಪಿ ಸರ್ಕಾರದ ರಾಜಕೀಯ ಪ್ರೇರಿತ ಕೃತ್ಯ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ನಲ್ಲಿ ದರ್ಗಾ ಸಮಿತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳ್ಳುತ್ತಿದ್ದಂತೆಯೇ ದರ್ಗಾ ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ಖಂಡನೀಯ ಎಂದರು.
ಚುನಾವಣೆ ಹತ್ತಿರ ಇದ್ದು, ಒಂದು ಕೋಮಿನ ಜನರ ಭಾವನೆಗೆ ಧಕ್ಕೆ ತರುವಂತಹ ಇಂತಹ ಕೃತ್ಯಗಳನ್ನು ನಡೆಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಸರ್ಕಾರ ಹೊರಟಿದೆ. ಜನರು ಪ್ರಜ್ಞಾವಂತರಿದ್ದಾರೆ ಎಂದು ಹೇಳಿದರು.
ಜನರ ಮುಂದೆ ಹೇಳಿಕೊಳ್ಳಲು ಬಿಜೆಪಿ ಸರ್ಕಾದ ಬಳಿ ವಿಷಯಗಳಿಲ್ಲ. ಜ್ಚಲಂತ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಹಿಂದು- ಮುಸ್ಲಿಮರ ಭಾವನೆ ಕೆರಳುವ ರೀತಿ ಈ ಸನ್ನಿವೇಶ ಸೃಷ್ಟಿ ಮಾಡಲಾಗಿದೆ ಎಂದು ಆರೋಪಿಸಿದರು.
ಈ ದರ್ಗಾಕ್ಕೆ ಕೇವಲ ಮುಸ್ಲಿಮರಷ್ಟೇ ಭಕ್ತರಿಲ್ಲ. ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಮುಖ್ಯವಾಗಿ ಇದು ಯಾವುದೇ ರೀತಿ ಜನ, ವಾಹನ ಸಂಚಾರಕ್ಜೆ ಅಡ್ಡಿಯಾಗದ ಸ್ಥಳದಲ್ಲಿದೆ. ಭಕ್ತರು ಮತ್ತು ಒಂದು ಕೋಮಿನ ಜನರ ಭಾವನೆ ಅರ್ಥಮಾಡಿಕೊಂಡು ಸರ್ಕಾರ ತೆರವು ಕಾರ್ಯಾಚರಣೆಗೆ ಕೈ ಹಾಕದೇ ಇರಬಹುದಿತ್ತು. ಆದರೆ, ಕೋರ್ಟ್ ಆದೇಶ ಬರುತ್ತಿದ್ದಂತೆಯೇ ತರಾತುರಿಯಲ್ಲಿ ಕಾರ್ಯಾಚರಣೆಗೆ ಮುಂದಾಗಿರುವುದು ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ ಎಂದು ಹೇಳಿದರು.
ಅವಕಾಶ ಸಿಕ್ಕರೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡುತ್ತೇನೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ತಿಳಿಸಿದರು.