ದತ್ತ ಜಯಂತಿ-ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸಿದ ಶಾಸಕ ಸಿ.ಟಿ. ರವಿ

C T RAVI
Advertisement

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ. ರವಿ ಮತ್ತಿತರರು ಬುಧವಾರ ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸದಸ್ಯ ಕುಮಾರ್, ಬಿಜೆಪಿ ಮುಖಂಡರುಗಳಾದ ಸಂತೋಷ್ ಕೋಟ್ಯಾನ್, ಜಿ. ಶಂಕರ್, ಕೋಟೆ ಅನಿಲ್, ಹಿರೇಮಗಳೂರು ಕೇಶವ ಮತ್ತಿತರರು ಈ ಸಂದರ್ಭದಲ್ಲಿ ಶಾಸಕರೊಂದಿಗಿದ್ದರು.
ಇದಲ್ಲದೆ ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಹಾಗೂ ಇತರೆ ಮಾಲಾಧಾರಿಗಳು ಸಹ ತಲಾ 5 ಮನೆಗಳಲ್ಲಿ ಭಿಕ್ಷೆ ಕೇಳುವ ಮೂಲಕ ಪಡಿ ಸಂಗ್ರಹಿಸಿದರು. ಗುರುವಾರ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿ ಸಂದರ್ಭದಲ್ಲಿ ಪಡಿಯನ್ನು ಸಮರ್ಪಿಸಿ ಮಾಲೆ ವಿಸರ್ಜಿಸುವ ಮೂಲಕ ಈ ವರ್ಷದ ಅಭಿಯಾನ ಪೂರ್ಣಗೊಳ್ಳಲಿದೆ.
ಪಡಿ ಸಂಗ್ರಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಸಿ.ಟಿ. ರವಿ, ಈ ವರ್ಷ ದತ್ತಪೀಠಕ್ಕೆ ಸಂಬಂಧಿಸಿದಂತೆ ಬೇಡಿಕೆ ಈಡೇರಿಸುವ ಕೆಲಸವನ್ನು ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಮಾಡಿದೆ. ಈ ವಿಚಾರದಲ್ಲಿ ಕಳೆದ ನಾಲ್ಕು ದಶಕಗಳ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಲ್ಲರಿಗೂ ದತ್ತ ಭಕ್ತರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.