ಮೈಸೂರು: ತ್ರಿವರ್ಣ ಧ್ವಜ ನಮ್ಮನ್ನೆಲ್ಲಾ ಒಗ್ಗೂಡಿಸುವ ಶಕ್ತಿಯಾಗಿದೆ. ಈ ತ್ರಿವರ್ಣ ಧ್ವಜದ ಅಡಿಯಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭವಿಷ್ಯ ಅಡಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹರಘರ್ ತಿರಂಗಾ ಕಾರ್ಯಕ್ರಮದ ಬಗ್ಗೆ ವ್ಯಕ್ತವಾಗಿರುವ ಟೀಕೆಗಳಿಗೆ ಪ್ರತಿಕ್ರಯಿಸಿದ ಅವರು, ತ್ರಿವರ್ಣ ಧ್ವಜ ನಮ್ಮ ತ್ಯಾಗ ಬಲಿದಾನದಿಂದ ಅಹಿಂಸಾತ್ಮಕವಾಗಿ ಪಡೆದಿರುವಂತಹ ಸ್ವಾತಂತ್ರ್ಯದ ಧ್ವಜ. ಈ ಧ್ವಜದ ಅಡಿಯಲ್ಲಿ ಭಾರತ ರಾಷ್ಟ್ರ ನಿರ್ಮಾಣವಾಗಿದೆ. ಸ್ವತಂತ್ರಪೂರ್ವದಲ್ಲಿ ನಮ್ಮ ಹಿರಿಯರು ಹೋರಾಟ ಮಾಡಿ ಗಳಿಸಿದ ಸ್ವಾತಂತ್ರ್ಯವಾಗಿದೆ. ಸ್ವಾತಂತ್ರ್ಯ ಹೋರಾಟವನ್ನು ಸರಿಯಾಗಿ ತಿಳಿದು, ತಿರುಚದೇ ಮುಂದಿನ ಜನಾಂಗಕ್ಕೆ ತಿಳಿಹೇಳುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜ ನಮ್ಮನ್ನೆಲ್ಲಾ ಒಗ್ಗೂಡಿಸುವ ಶಕ್ತಿಯಾಗಿದೆ. ಇಂತಹ ಧ್ವಜದ ಬಗ್ಗೆ ಹಗುರವಾಗಿ ಮಾತನಾಡುವುದು ಯಾವುದೇ ದೇಶ ಭಕ್ತನಿಗೆ ಸೂಕ್ತವಾದುದಲ್ಲ. ಇಂತಹ ಕೆಲಸವನ್ನು ಯಾರೂ ಮಾಡಬಾರದು. ದೇಶದ ಜನ ಇನ್ನಷ್ಟು ಸ್ಫೂರ್ತಿ ಹಾಗೂ ಪ್ರೇರಣೆಯಿಂದ ತಿರಂಗಾ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಾರೆ ಎಂದು ತಿಳಿಸಿದರು.