ತ್ರಿಮತಸ್ಥ ಬ್ರಾಹ್ಮಣರು ಸಂಘಟಿತರಾಗಬೇಕಾದ ಅಗತ್ಯವಿದೆ: ಹಾರನಹಳ್ಳಿ

ಅಶೋಕ್ ಹಾರನಹಳ್ಳಿ
Advertisement

ಮಂಗಳೂರು: ಬ್ರಾಹ್ಮಣರು ಎನ್ನುವ ಕಾರಣಕ್ಕೆ ಟೀಕೆ, ವಿರೋಧ ಮಾಡುತ್ತಿರುವ ಕಾಲಘಟ್ಟದಲ್ಲಿ ಎಲ್ಲ ಉಪಪಂಗಡಗಳ ತ್ರಿಮತಸ್ಥ ಬ್ರಾಹ್ಮಣರು ಸಂಘಟಿತರಾಗಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಸರ್ಕಾರದ ಮಟ್ಟದಲ್ಲಾಗಲೀ, ಸಮಾಜದ ಮಟ್ಟದಲ್ಲಾಗಲೀ ಸಹಾಯ ಸಿಗುವುದಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಕರೆ ನೀಡಿದ್ದಾರೆ.
ನಗರದ ನಂತೂರಿನಲ್ಲಿರುವ ಭಾರತೀ ಕಾಲೇಜಿನಲ್ಲಿ ಭಾನುವಾರ ಬ್ರಾಹ್ಮಣ ಮಹಾಸಭಾದ ದ. ಕ. ಜಿಲ್ಲಾ ಕಚೇರಿ ಉದ್ಘಾಟನೆ ನೆರವೇರಿಸಿದ ಬಳಿಕ ನಡೆದ ಬ್ರಹ್ಮಸಭೆ'ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬ್ರಾಹ್ಮಣರು ಪರಸ್ಪರ ಟೀಕೆ ಮಾಡದೆಬ್ರಾಹ್ಮಣ’ ಎಂಬ ಒಂದೇ ಪದದ ಅಡಿಯಲ್ಲಿ ಒಗ್ಗೂಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮುಖಂಡರನ್ನು ಸೇರಿಸಿವೆ. ವಕೀಲರು, ಮಹಿಳಾ ವಿಭಾಗ, ವೈದ್ಯಕೀಯ, ಉದ್ಯಮ ಇತ್ಯಾದಿ ವಿಭಾಗಗಳನ್ನು ಆರಂಭಿಸಲಾಗಿದ್ದು, ಮುಂದೆ ಸಹಕಾರಿ, ಶಿಕ್ಷಣ ಕ್ಷೇತ್ರದಲ್ಲಿ ಕೂಡ ಸಂಘಟನೆ ಮಾಡಲಿವೆ. ಈ ಮೂಲಕ ಬ್ರಾಹ್ಮಣರಿಗೆ ಅಗತ್ಯವಿರುವ ಸೌಲಭ್ಯಗಳು ಸಿಗುವಂತಾಗಬೇಕಿದೆ ಎಂದು ಹೇಳಿದರು.
ಕೆಲವರು ಬ್ರಾಹ್ಮಣರಿಗೆ ವಿರೋಧ ಅಲ್ಲ, ಬ್ರಾಹ್ಮಣ್ಯಕ್ಕೆ ವಿರೋಧ ಎನ್ನುತ್ತಾರೆ. ಎಲ್ಲರಿಗೆ ಒಳಿತಾಗಲಿ ಎಂದು ಬ್ರಾಹ್ಮಣರು ಬಯಸಿದರೆ, ಯಾವುದೇ ತಿಳುವಳಿಕೆ ಇಲ್ಲದೆ ಬ್ರಾಹ್ಮಣರು ಎನ್ನುವ ಕಾರಣಕ್ಕೇ ಟೀಕೆ ಮಾಡುತ್ತಾರೆ. ಕೋಟ್ಯಂತರ ರು. ಭ್ರಷ್ಟಾಚಾರ ವಿಚಾರಗಳನ್ನು ಬಿಟ್ಟು ಪುರೋಹಿತರ ತಟ್ಟೆ ಕಾಸಿನ ಬಗ್ಗೆ ಮಾತನಾಡುತ್ತಾರೆ. ಇಂಥ ಪರಿಸ್ಥಿತಿ ಇರುವಾಗ ಬ್ರಾಹ್ಮಣರು ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ. ಈ ಮೂಲಕ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ ಎಂದು ಅಶೋಕ್ ಹಾರನಹಳ್ಳಿ ಪ್ರತಿಪಾದಿಸಿದರು.
ಮೀಸಲಾತಿ ಮರೀಚಿಕೆ: ಆರ್ಥಿಕವಾಗಿ ದುರ್ಬಲ ಪರಿಸ್ಥಿತಿಯಲ್ಲಿರುವ ಬ್ರಾಹ್ಮಣರಿಗೆ ಸಂವಿಧಾನ ಅನುಕೂಲ ಮಾಡಿಕೊಟ್ಟು ಮೀಸಲಾತಿ ಒದಗಿಸಿದರೂ ಈ ಪಕ್ಷದವರೂ, ಆ ಪಕ್ಷದವರೂ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಕಳೆದ ನಾಲ್ಕು ಶೈಕ್ಷಣಿಕ ವರ್ಷಗಳಲ್ಲಿ ಮೀಸಲಾತಿಯನ್ನು ನೀಡಿಲ್ಲ. ಇನ್ನೂ ನೀಡದಿದ್ದರೆ ಕೋರ್ಟ್‌ಗೆ ಹೋಗಬೇಕಾಗಿದೆ ಎಂದರು.
ಸಂಸ್ಕಾರವಂತರಾಗಿ: ಬ್ರಾಹ್ಮಣರು ಸಂಸ್ಕಾರವನ್ನು ಉಳಿಸುವ ಕೆಲಸ ಮಾಡದೆ ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾದರೆ ಮಕ್ಕಳು ಕೂಡ ದಾರಿ ತಪ್ಪುತ್ತಾರೆ. ಹೀಗಾಗದಂತೆ ಮೊದಲು ನಾವು ಎಚ್ಚೆತ್ತುಕೊಳ್ಳಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಪತಿ-ಪತ್ನಿ ಹೊಂದಾಣಿಕೆ ಕಷ್ಟವಾಗುತ್ತಿದೆ. ಕೂಡು ಕುಟುಂಬ ದೂರವಾಗುತ್ತಿದೆ. ಹಳ್ಳಿ ಕಡೆ ಬರಲು ಹೆಣ್ಮಕ್ಕಳು ಒಪ್ಪುತ್ತಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಕೂಡ ತುರ್ತು ಗಮನ ಹರಿಸಬೇಕಾಗಿದೆ ಎಂದು ಅಶೋಕ್ ಹಾರನಹಳ್ಳಿ ಕಿವಿಮಾತು ಹೇಳಿದರು.
ಬಲವಿದ್ದರೆ ಬೆಲೆ: ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ, ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ಬ್ರಾಹ್ಮಣರಲ್ಲಿ ಬಲವಿದ್ದರೆ ಮಾತ್ರ ನಮ್ಮ ಮಾತಿಗೆ ಬೆಲೆ ಬರುತ್ತದೆ. ಈ ನಿಟ್ಟಿನಲ್ಲಿ ಎಲ್ಲ ತ್ರಿಮತಸ್ಥರು ಇಂದು ಜತೆಯಾಗಿವೆ. ಸಮುದಾಯದ ಎಲ್ಲರೂ ಸಂಘಟನೆಯ ಜತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಡಾ.ಬಿ.ಎಸ್. ರಾಘವೇಂದ್ರ ಭಟ್ ಮಾತನಾಡಿ, ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷರಾಗುವ ಮೊದಲು ಮಹಾಸಭಾದಲ್ಲಿ ಕೇವಲ 43 ಸಾವಿರ ಸದಸ್ಯರಿದ್ದರು. ಇದೀಗ ಕೆಲವೇ ತಿಂಗಳುಗಳಲ್ಲಿ 12 ಸಾವಿರ ಹೊಸ ಸದಸ್ಯರ ಸೇರ್ಪಡೆಯಾಗಿದೆ. ಕನಿಷ್ಠ 5 ಲಕ್ಷ ಸದಸ್ಯರಾದರೂ ಆಗಬೇಕಾಗಿದೆ. ಈ ಸಂಖ್ಯೆ ರಾಜಕೀಯ ನೆಲೆಗಟ್ಟಿನಲ್ಲಿಯೂ ಅತಿ ಮುಖ್ಯ. ದಕ್ಷಿಣ ಕನ್ನಡದಲ್ಲಿ ಕನಿಷ್ಠ 25 ಸಾವಿರ ಸದಸ್ಯತ್ವ ಮಾಡುವ ಉದ್ದೇಶವಿದ್ದು, ಎಲ್ಲ ತ್ರಿಮತಸ್ಥ ಬ್ರಾಹ್ಮಣರು ಸದಸ್ಯತ್ವಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅಶೋಕ್ ಹಾರನಹಳ್ಳಿ ಅವರನ್ನು ಯಕ್ಷಗಾನದ ಕಿರೀಟ ತೊಡಿಸಿ ವಿಶೇಷವಾಗಿ ಸನ್ಮಾನಿಸಲಾಯಿತು. ಮಹಾಸಭಾ ಪದಾಧಿಕಾರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿ, ಹರಿಪ್ರಸಾದ್ ಸೇಡಿಯಾಪು, ಉಮಾ ಸೋಮಯಾಜಿ, ಚೇತನಾ ದತ್ತಾತ್ರೇಯ, ತ್ರಿಮತಸ್ಥ ಬ್ರಾಹ್ಮಣ ಸಂಘಟನೆಗಳ ಮುಖಂಡರಾದ ಗಣೇಶ್ ಮೋಹನ್ ಕಾಶಿಮಠ, ಎಂ.ಎಸ್. ಗುರುರಾಜ್, ಪದ್ಮಜಾ ಭಿಡೆ, ಹರ್ಷಕುಮಾರ್ ಕೇದಿಗೆ, ಪುರುಷೋತ್ತಮ ಭಟ್, ಕದ್ರಿ ಕೃಷ್ಣ ಭಟ್, ಚಂದ್ರಶೇಖರ ಮಯ್ಯ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ, ಡಾ. ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಉಪಸ್ಥಿತರಿದ್ದರು. ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಮಹೇಶ್ ಕಜೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.