ತೈವಾನ್‌ನಲ್ಲಿ ಭೂಕಂಪ: ೯ ಬಲಿ

Advertisement

ನವದೆಹಲಿ: ತೈವಾನ್‌ನಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮವಾಗಿ ಕನಿಷ್ಠ ಒಂಬತ್ತು ಜನರು ಅಸುನೀಗಿದ್ದು ೯೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಾಗೆಯೇ ಡಜನ್‌ಗಟ್ಟಲೆ ಕಟ್ಟಡಗಳಿಗೂ ಹಾನಿ ಉಂಟಾಗಿದೆ. ಒಂದು ಹಂತದಲ್ಲಿ ಜಪಾನ್ ಹಾಗೂ ಫಿಲಿಫೈನ್ಸ್ ಭಾಗದಲ್ಲಿ ಸುನಾಮಿ ಅಲೆಗಳೇಳುವ ಎಚ್ಚರಿಕೆ ನೀಡಲಾಯಿತು. ಸ್ಥಳೀಯ ಕಾಲಮಾನ ಬೆಳಗ್ಗೆ ೮ ಗಂಟೆಗೆ ೭.೪ ತೀವ್ರತೆಯ ಭೂಕಂಪ ಉಂಟಾಯಿತು. ಈ ಕಂಪನದ ಕೇಂದ್ರಬಿಂದು ತೈವಾನ್‌ನ ಹುವಾಲಿಯನ್ ನಗರದ ದಕ್ಷಿಣದಲ್ಲಿ ೩೪.೮ ಕಿ.ಮೀ ಭೂಮಿ ಆಳದಲ್ಲಿತ್ತು.
ಭೂಕಂಪದ ವೇಳೆ ಬೆಟ್ಟ ಹತ್ತುತ್ತಿದ್ದ ಏಳು ಜನರ ಗುಂಪಿನಲ್ಲಿದ್ದ ಮೂವರು ಉರುಳುತ್ತಿದ್ದ ಬಂಡೆಕಲ್ಲುಗಳ ಮಧ್ಯೆ ಸಿಲುಕಿ ಸಾವನ್ನಪ್ಪಿದರು. ಇದೇ ಸಮಯದಲ್ಲಿ ಉರುಳುತ್ತಿದ್ದ ಬಂಡೆಕಲ್ಲುಗಳು ಕಾರು ಹಾಗೂ ಲಾರಿಗೆ ಅಪ್ಪಳಿಸಿದ್ದರಿಂದ ಆ ಎರಡೂ ವಾಹನಗಳ ಚಾಲಕರು ಮೃತಪಟ್ಟರು. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೂ ದುರಂತಮಯ ರೀತಿಯಲ್ಲಿ ಸಾವಿಗೀಡಾದನು.