ತಾಯಿ ಶವದ ಜತೆ ೪ ದಿನ ಕಳೆದ ಪುತ್ರಿಯೂ ಸಾವು

Advertisement

ಕುಂದಾಪುರ: ತಾಯಿಯ ಶವದೊಂದಿಗೆ ಅನ್ನ ನೀರು ಇಲ್ಲದೆ ಮೂರ್ನಾಲ್ಕು ದಿನ ಕಳೆದು ತೀವ್ರ ಅಸ್ವಸ್ಥಗೊಂಡಿದ್ದ ಬುದ್ಧಿಮಾಂದ್ಯ ಮಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಶನಿವಾರ ಕುಂದಾಪುರ ತಾಲ್ಲೂಕಿನ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ನಡೆದಿದೆ.
ತಾಯಿ ಜಯಂತಿ ಶೆಟ್ಟಿ(೬೨) ಹಾಗೂ ಪುತ್ರಿ ಪ್ರಗತಿ ಶೆಟ್ಟಿ (೩೨) ಮೃತರು. ತೀವ್ರ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆದಿಂದ ಬಳಲುತ್ತಿದ್ದ ಜಯಂತಿ ಶೆಟ್ಟಿ ಅವರು, ಹುಟ್ಟಿನಿಂದಲೇ ಬುದ್ಧಿಮಾಂದ್ಯಳಾಗಿದ್ದ ಪುತ್ರಿ ಪ್ರಗತಿ ಶೆಟ್ಟಿ ಜೊತೆ ವಾಸವಿದ್ದರು. ಈಚೆಗೆ ಜಯಂತಿ ಶೆಟ್ಟಿ ಅವರ ಕಾಯಿಲೆ ಗಂಭೀರವಾಗಿ ಮೃತಪಟ್ಟಿದ್ದಾರೆ. ಬುದ್ಧಿಮಾಂದ್ಯ ಪುತ್ರಿ ಏನು ಮಾಡಬೇಕು ಎಂದು ತೋಚದೆ ತಾಯಿಯ ಶವದ ಜತೆಗೆ ಮೂರ್ನಾಲ್ಕು ದಿನ ಕಳೆದಿದ್ದಾರೆ. ಮನೆಯಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು ಕಿಟಕಿ ತೆರೆದು ನೋಡಿದಾಗ ಜಯಂತಿ ಶೆಟ್ಟಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜತೆಗೆ ಮಗಳು ಪ್ರಗತಿ ಶೆಟ್ಟಿ ಕೂಡ ತೀವ್ರ ಅಸ್ವಸ್ಥಗೊಂಡಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕುಂದಾಪುರ ಠಾಣೆ ಇನ್ಸ್‌ಪೆಕ್ಟರ್ ವಿನಯ್ ಕೊರ್ಲಹಳ್ಳಿ ಹಾಗೂ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಮನೆಯ ಬಾಗಿಲು ಒಡೆದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಗತಿ ಶೆಟ್ಟಿ ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಗತಿ ಶೆಟ್ಟಿ ಶನಿವಾರ ಮೃತಪಟ್ಟಿದ್ದಾರೆ. ತಾಯಿ ಹಾಗೂ ಮಗಳ ಮೃತದೇಹಗಳ ಅಂತ್ಯಸಂಸ್ಕಾರ ಹೆಂಗವಳ್ಳಿಯಲ್ಲಿ ನಡೆಸಲಾಯಿತು.