ಸ್ವಾತಂತ್ರ್ಯ ಎಂದರೆ ಕೇವಲ ವಾಕ್ ಸ್ವಾತಂತ್ರ್ಯ ಅಲ್ಲ. ಅರ್ಥಿಕ ಸ್ವಾತಂತ್ರ್ಯ ಬೇಕು. ಅದರಲ್ಲೂ ಮಹಿಳೆಯರಿಗೆ ಉತ್ತಮ ಶಿಕ್ಷಣ- ಉದ್ಯೋಗ ನೀಡಬೇಕು. ಆಗ ಹೆರಿಗೆ ಕಾಲವೂ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮೂಢನಂಬಿಕೆಗೆ ಬಲಿಯಾಗುವುದು ನಿಲ್ಲುತ್ತದೆ.
ಹಿಂದೆ ದೇಶದ ಅಭಿವೃದ್ಧಿಯನ್ನು ಅಳೆಯಲು ಮಾನದಂಡಗಳಲ್ಲಿ ಮೂಲಭೂತ ಸವಲತ್ತುಗಳನ್ನು ಪರಿಗಣಿಸುವುದು ರೂಢಿಯಾಗಿತ್ತು. ಈಗ ಮಾನದಂಡಗಳು ಬದಲಾಗಿದ್ದು, ತಾಯಿ ಮತ್ತು ಮಗುವಿನ ಆರೋಗ್ಯದ ಕಡೆ ಗಮನಹರಿಸುವುದು ಪ್ರಮುಖವಾಗಿದೆ. ಬಹುತೇಕ ತಾಯಂದಿರು ರಕ್ತಹೀನತೆಯಿಂದ ಬಳಸಲುತ್ತಿದ್ದಾರೆ. ನವಜಾತ ಶಿಶುಗಳ ತೂಕ ಬಹಳ ಕಡಿಮೆಯಾಗುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಉತ್ತಮ ಅಹಾರ ನೀಡದೇ ಇರುವುದು ಹಾಗೂ ಆರೋಗ್ಯ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟದಲ್ಲಿ ಉತ್ತಮಪಡಿಸಲು ಸಾಧ್ಯವಾಗದೆ ಇರುವುದು.
ಇದರೊಂದಿಗೆ ಈಗ ಹೊಸ ಸಮಸ್ಯೆ ಎಂದರೆ ಜನರ ಮೂಢನಂಬಿಕೆ. ಜನರಿಗೆ ಶಿಕ್ಷಣ ದೊರೆತ ಮೇಲೆ ಇದು ಕಡಿಮೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಅದರೆ ದಿನೇ ದಿನೆ ಇದು ಅಧಿಕಗೊಳ್ಳುತ್ತಿದೆ. ಕುಷ್ಟಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಈಗಲೂ ಬಾಣಂತಿ ಮತ್ತು ಮಗುವನ್ನು ಊರ ಹೊರಗೆ ಗುಡಿಸಲಿನಲ್ಲಿಡುವ ಪದ್ಧತಿ ಇದೆ. ತುಮಕೂರು ಜಲ್ಲೆಯಲ್ಲೂ ಇದೇ ರೀತಿ ಗ್ರಾಮದ ಹೊರಗೆ ಇಟ್ಟಿದ್ದರಿಂದ ಮಗು ಸಾವನ್ನಪ್ಪಿತು. ಈ ಪ್ರಕರಣಗಳು ಜನರ ಕಣ್ಣು ತೆರೆಸಬೇಕು. ಹಿಂದೆ ಗ್ರಾಮೀಣ ಜನರಲ್ಲಿದ್ದ ರೋಗ ನಿರೋಧಕ ಶಕ್ತಿ ಈಗ ಇಲ್ಲ. ಜನ ನಕಲಿ ವೈದ್ಯರು ಮತ್ತು ಮೂಢನಂಬಿಕೆಗೆ ಬಲಿಯಾಗುತ್ತಿದ್ದಾರೆ. ಆಧುನಿಕ ಔಷಧಗಳು ಸುಲಭ ದರದಲ್ಲಿ ಲಭಿಸುತ್ತಿಲ್ಲ. ನಗರಗಳಲ್ಲಿರುವ ವೈದ್ಯರು ತಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನು ಗ್ರಾಮೀಣ ಸೇವೆ ನೀಡಿದರೆ ಅಲ್ಲಿಯ ಪರಿಸ್ಥಿತಿಯನ್ನು ಸುಧಾರಿಸಬಹುದು. ಯುವವೈದ್ಯರು ಕನಿಷ್ಟ ೨ ವರ್ಷ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕೆಂದು ಸರ್ಕಾರದ ನಿಯಮ ಜಾರಿಗೆ ಬಂದಿಲ್ಲ. ಅವರಿಗೆ ಪದವಿಯ ಸರ್ಟಿಫಿಕೇಟ್‌ಗಳನ್ನು ಗ್ರಾಮೀಣ ಸೇವೆ ಪೂರ್ಣಗೊಳಿಸದೇ ನೀಡಬಾರದು. ಈ ವಿಷಯದಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಒಂದೇ ನಿಯಮ ಅನ್ವಯವಾಗಬೇಕು.
ವೈದ್ಯಕೀಯ ಸೀಟು ಪಡೆಯುವಾಗ ಕೊಡುವ ವಿದ್ಯಾರ್ಥಿ ನೀಡುವ ಮುಚ್ಚಳಿಕೆಗೆ ನಂತರದ ದಿನಗಳಲ್ಲಿ ಬೆಲೆಯೇ ಇರುವುದಿಲ್ಲ. ಜನರ ತೆರಿಗೆ ಹಣದಲ್ಲಿ ವೈದ್ಯರಾದವರಿಗೆ ಸಮಾಜದ ಋಣದ ಬಗ್ಗೆ ಕಾಳಜಿ ಇರಬೇಕು. ಹಳ್ಳಿಯ ಮನೆಯಲ್ಲೇ ಒಂದು ಕೋಣೆಯಲ್ಲಿ ಗಾಳಿ ಮತ್ತು ಬೆಳಕು ಚೆನ್ನಾಗಿ ಬರುವಂತೆ ಮಾಡಿ ತಾಯಿ ಮತ್ತು ಮಗುವಿಗೆ ಅವಕಾಶ ಮಾಡಿಕೊಡಬೇಕು. ಕತ್ತಲ ಕೋಣೆ ಸರಿಯಲ್ಲ. ನಿಸರ್ಗದತ್ತವಾದ ಹೆರಿಗೆಯನ್ನು ಸ್ವಾಗತಿಸಬೇಕೆ ಹೊರತು ತಾಯಿ ಮತ್ತು ಮಗುವಿಗೆ ಶಿಕ್ಷೆ ವಿಧಿಸಬಾರದು. ಹಿಂದಿನವರಿಗೆ ಕೆಲವು ವಿಷಯಗಳಲ್ಲಿ ಮಾಹಿತಿ ಇರಲಿಲ್ಲ. ಈಗ ವಿಜ್ಞಾನ ಸಾಕಷ್ಟು ಬೆಳೆದಿದೆ. ಹಿಂದೆ ಹೆರಿಗೆಯನ್ನು ಸೂಲಗಿತ್ತಿಯರೇ ಮಾಡಿಸುತ್ತಿದ್ದರು. ಅದರಿಂದ ತಾಯಿ ಮತ್ತು ಮಗುವಿಗೆ ನಂಜು ಕಾಣಿಸಿಕೊಳ್ಳುತ್ತಿತ್ತು. ಅದರಲ್ಲೂ ಸೂರ್ಯನ ಕಿರಣಗಳು ಬಹುತೇಕ ರೋಗಾಣುಗಳನ್ನು ನಿಷ್ಕ್ರಿಯಗೊಳಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಎಲ್ಲ ರಾಜ್ಯ ಸರ್ಕಾರಗಳು ಪ್ರತಿಯೊಂದು ಹೆರಿಗೆ ಆಸ್ಪತ್ರೆಯಲ್ಲೇ ನಡೆಯಬೇಕೆಂದು ಸೂಚನೆ ನೀಡುತ್ತಿವೆ. ಇದಕ್ಕಾಗಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ.
ನಮ್ಮ ತಾಯಂದಿರಲ್ಲಿ ರಕ್ತಹೀನತೆ ದೊಡ್ಡ ಸಮಸ್ಯೆ, ನೀತಿ ಆಯೋಗದಿಂದ ಹಿಡಿದು ಕೇಂದ್ರ ಮತ್ತು ರಾಜ್ಯದ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗುವುದು ತಾಯಿ ಮತ್ತು ನವಜಾತ ಶಿಶುಗಳ ಮರಣ ಸಂಖ್ಯೆಯನ್ನು ಅವಲಂಬಿಸಿಯೇ. ಕರ್ನಾಟಕದಲ್ಲಿ ೧ ಲಕ್ಷ ಜನನದಲ್ಲಿ ೨೧ ತಾಯಂದಿರು ಸಾವಿಗೆ ಬಲಿಯಾಗುತ್ತಿದ್ದಾರೆ.
ಕೇರಳದಲ್ಲಿ ಇದು ಅತಿ ಕಡಿಮೆ ಇದೆ. ತಮಿಳುನಾಡಿನಲ್ಲಿ ನಮಗಿಂತ ಹೆಚ್ಚು ಸಾವಿನ ಸಂಖ್ಯೆ ಇದೆ. ಕಲಬುರ್ಗಿ, ರಾಯಚೂರು, ಗದಗ, ಕೊಪ್ಪಳ, ಬೀದರ್, ಯಾದಗಿರಿ, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿಯೇ ಇದೆ. ರಾಯಚೂರಿನಲ್ಲಿ ಅತಿ ಕಡಿಮೆ ತೂಕದ ಮಕ್ಕಳು ಹುಟ್ಟುತ್ತಿವೆ. ಇಲ್ಲಿಯ ಜನರಿಗೆ ಬಡತನ ಒಂದು ಕಡೆ, ಮೂಢನಂಬಿಕೆ ಮತ್ತೊಂದು ಕಡೆ. ಹೀಗಾಗಿ ಅವರು ಎರಡು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ.