ತಾಯಿ ಹಾಲು ಅಮೃತ ಸಮಾನ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಆದಾಗ್ಯೂ ವಿವಿಧ ಕಾರಣಗಳಿಂದ ಮಗುವಿಗೆ ಹಾಲುಣಿಸುವಲ್ಲಿ ಕೆಲ ತಾಯಂದಿರು ವಿಮುಖರಾಗುತ್ತಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ತಾಯಿಯಲ್ಲಿ ಎದೆಹಾಲು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದು. ಇಂಥ ಪ್ರಕರಣಗಳಲ್ಲಿ ತಾಯಿ-ಮಗುವಿನ ನೆರವಿಗೆ ಬರಲು ತಾಯಿಹಾಲಿನ ಬ್ಯಾಂಕ್‌ಗಳು ಸ್ಥಾಪನೆಯಾಗುತ್ತಿವೆ.
ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಈ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕರ್ನಾಟಕದಲ್ಲೇ ನಾಲ್ಕು ಕಡೆ ಬ್ಯಾಂಕ್ ಸ್ಥಾಪಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು ಹಾಗೂ ಬೆಳಗಾವಿಗಳಲ್ಲಿ ತಾಯಿಹಾಲಿನ ಬ್ಯಾಂಕಿಗೆ ಚಾಲನೆ ನೀಡಲಾಗಿದೆ. ತಾಯಂದಿರು ಹಾಲು ದಾನ ಮಾಡುವ ಮೂಲಕ ಈ ಬ್ಯಾಂಕ್ ಬಲ ಪಡಿಸಬೇಕಾಗಿದ್ದು, ಹಾಲಿಲ್ಲದ ತಾಯಂದಿರು ಮಡಿವಂತಿಕೆ ಬಿಟ್ಟು ಈ ಬ್ಯಾಂಕ್ ಹಾಲಿನ ಸೌಲಭ್ಯ ಪಡೆಯಬೇಕಾಗಿದೆ.
ತಾಯಿ ಹಾಲು ಏಕೆ ಮುಖ್ಯ…
ಎದೆ ಹಾಲು ಶಿಶುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೋವಿಡ್‌ನಂತಹ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ ನವಜಾತ ಶಿಶುಗಳಿಗೆ ಸ್ತನ್ಯಪಾನ ಅತಿಮುಖ್ಯ ಎನ್ನುತ್ತಾರೆ ಬೆಂಗಳೂರಿನ ಅಪೊಲೊ ಕ್ರೇಡಲ್ & ಚಿಲ್ಡ್ರನ್ಸ್ ಆಸ್ಪತ್ರೆ ವೈದ್ಯೆ ಡಾ. ಜೋಶಿತಾ ನಾಯಕ್.
ಎದೆ ಹಾಲಿನಲ್ಲಿರುವ ಕೆಲವು ಅಂಶಗಳು ಶಿಶುಗಳಲ್ಲಿ ಸೋಂಕುಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಶಿಶುಗಳಿಗೆ ಎದೆ ಹಾಲನ್ನು ಕನಿಷ್ಠ ೬ ತಿಂಗಳವರೆಗೆ ಉಣಿಸಿ ಎನ್ನುವುದು ವೈದ್ಯರ ಕಿವಿಮಾತು.
ಇತ್ತೀಚಿನವರೆಗೂ ಎದೆಹಾಲು ತಾಯಿಯಿಂದ ನೇರವಾಗಿ ಬರುವುದರಿಂದ ಬ್ಯಾಕ್ಟೀರಿಯಾ ರಹಿತವಾಗಿರುತ್ತದೆ, ಸೋಂಕುಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಎಂಬುದು ಮುಖ್ಯ ವಾದವಾಗಿತ್ತು. ಆದರೆ ಈಗ ತಾಯಿಯ ಹಾಲಿನಲ್ಲಿರುವ ಅಂಶಗಳು ಮಗುವನ್ನು ಹಲವು ಸೋಂಕುಗಳಿಂದ ರಕ್ಷಿಸುವುದು, ವಿಶೇಷವಾಗಿ ಮೊದಲ ಕೆಲವು ತಿಂಗಳುಗಳಲ್ಲಿ ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿ ಮಾಡುವುದು ಸಾಬೀತಾಗಿದೆ.
ಮಗು ೨ನೇ ವಯಸ್ಸಿಗೆ ತಲುಪುವವರೆಗೂ ಅಗತ್ಯ ಪೌಷ್ಟಿಕಾಂಶವನ್ನು ಕಡ್ಡಾಯವಾಗಿ ನೀಡಬೇಕು. ಇದು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ.
ಇಂದು ನಾವು ಸಾಂಕ್ರಾಮಿಕ ರೋಗದ ನಡುವೆ ಜೀವಿಸುತ್ತಿದ್ದೇವೆ. ತಾಯಿಹಾಲು ರೋಗ ನಿರೋಧಕ ಶಕ್ತಿ ಬಲಪಡಿಸುವುದರಿಂದ ಕೋವಿಡ್‌ನಂತಹ ವೈರಸ್‌ಗಳಿಂದ ರಕ್ಷಿಸಬಹುದು. ಆದ್ದರಿಂದ, ತಾಯಂದಿರು ತಮ್ಮ ಮಗುವಿಗೆ ಕನಿಷ್ಠ ಮೊದಲ ೬ ತಿಂಗಳವರೆಗೆ ಎದೆಹಾಲು ಉಣಿಸುವುದು ಕಡ್ಡಾಯ. ಈ ಅವಧಿಯಲ್ಲಿ ಮಗು ಬೇರೆ ಏನನ್ನೂ ಸೇವಿಸಬಾರದು. ೬ ತಿಂಗಳ ನಂತರವಷ್ಟೇ ಮಗುವಿಗೆ ಎದೆಹಾಲಿನ ಜೊತೆಗೆ ತಾಜಾ ಮತ್ತು ಸಂಸ್ಕರಿಸಿದ ಆಹಾರ ನೀಡಬಹುದು. ಇಮ್ಯುನೊಗ್ಲೊಬ್ಯುಲಿನ್‌ಗಳು, ಪ್ರತಿಕಾಯಗಳು ಎಂದು ಸಹ ಕರೆಯಲ್ಪಡುವ ಈ ಐದು ರೂಪಗಳು ಎದೆ ಹಾಲಿನಲ್ಲಿವೆ ಎನ್ನುತಾರೆ ವೈದ್ಯೆ ಡಾ.ಜೋಶಿತಾ ನಾಯಕ್.
ಹಾಲುಣಿಸುವಾಗ ಅನುಸರಿಸಬೇಕಾದ ಅಂಶಗಳು
ಮಗು ಹುಟ್ಟಿದ ೧ ಗಂಟೆಯೊಳಗೆ ಎದೆಹಾಲು ಉಣಿಸುವುದನ್ನು ಪ್ರಾರಂಭಿಸಬೇಕು ಮತ್ತು ಮಗುವಿಗೆ ೬ ತಿಂಗಳಾಗುವವರೆಗೆ ಅದನ್ನು ಮುಂದುವರಿಸುವುದು ಮುಖ್ಯ. ಇದು ಬೊಜ್ಜು ಬರದಂತೆ ತಡೆಯುವುದು ಮಾತ್ರವಲ್ಲದೆ, ಆರೋಗ್ಯಕರವಾಗಿಯೂ ಇಡುತ್ತದೆ.
ಮಗುವಿಗೆ ಎರಡು ವರ್ಷವಾಗುವವರೆಗೆ ಎದೆಹಾಲು ನೀಡುವುದನ್ನು ಮುಂದುವರಿಸಬಹುದು.
೬ ತಿಂಗಳ ನಂತರ, ಮಗುವಿಗೆ ಹಣ್ಣು, ತರಕಾರಿ, ದ್ವಿದಳ ಧಾನ್ಯಗಳು, ಬೀಜಗಳು ಮತ್ತು ಬೀಜ ಧಾನ್ಯಗಳು ಮತ್ತು ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ನೀಡಬಹುದು.
ತಾಯಿ- ಮಗು ಇಬ್ಬರಿಗೂ ಲಾಭಕರ
- ಮಗುವಿಗೆ ಮೊದಲಿನಿಂದಲೇ ಹಾಲು ಕುಡಿಸಿದಾಗ ಅದು ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಎಲ್ಲಾ ಪೋಷಕಾಂಶಗಳನ್ನು ಪೂರೈಸುತ್ತದೆ. ಇದು ಪ್ರಬಲ ರೋಗ ನಿರೋಧಕ ಶಕ್ತಿಗೆ ಸರಿಯಾದ ಅಡಿಪಾಯವನ್ನು ನಿರ್ಮಿಸುತ್ತದೆ.
- ಮಗುವನ್ನು ಬೊಜ್ಜು, ಸಾಮಾನ್ಯ ಅಲರ್ಜಿಗಳು ಮತ್ತು ಅನಿರೀಕ್ಷಿತ ಅನಾರೋಗ್ಯಗಳಿಂದ ರಕ್ಷಿಸುತ್ತದೆ.
- ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಪ್ರಮುಖ ಕಾಯಿಲೆಗಳಿಂದ ರಕ್ಷಿಸುತ್ತದೆ.
- ಕಿವಿ ಸೋಂಕು ತಡೆಯುತ್ತದೆ.
- ಶಿಶುಗಳು ತಾಯಿಯ ಹಾಲನ್ನು ಸುಲಭವಾಗಿ ಜೀರ್ಣಿಸಬಲ್ಲವು. ಅತಿಸಾರ, ಮಲಬದ್ಧತೆ ಅಥವಾ ಹೊಟ್ಟಉಬ್ಬರ ಪ್ರಕರಣಗಳನ್ನು ತಪ್ಪಿಸುತ್ತದೆ.
- ತಾಯಿ ಹಾಲು ಕುಡಿದ ಮಕ್ಕಳು ಆರೋಗ್ಯವಂತರಾಗಿ ಬೆಳೆಯುವುದರ ಜತೆ ಉತ್ತಮ ಬುದ್ಧಿಮತ್ತೆಯನ್ನೂ ಹೊಂದಿರುತ್ತಾರೆ.
- ಶಿಶುಮರಣ ತಡೆಗಟ್ಟುವಲ್ಲಿ ಸ್ತನ್ಯಪಾನ ಪ್ರಮುಖ ಪಾತ್ರ ವಹಿಸುತ್ತದೆ.
ಸ್ತನ್ಯಪಾನ ತಾಯಂದಿರಿಗೂ ಲಾಭದಾಯಕ. ಇದು ಟೈಪ್ ೨ ಮಧುಮೇಹ ಮತ್ತು ಕೆಲವು ರೀತಿಯ ಸ್ತನ ಕ್ಯಾನ್ಸರ್ ಹಾಗೂ ಅಂಡಾಶಯದ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಗೂ ಮುನ್ನದ ತೂಕಕ್ಕೆ ಮರಳಲು ಸಹಾಯ ಮಾಡುತ್ತದೆ.
ಕೆಲವು ಮಹಿಳೆಯರು ಮಗುವಿಗೆ ಅಗತ್ಯವಿರುವಷ್ಟು ಹಾಲನ್ನು ಉತ್ಪಾದಿಸಲು ಸಾಧ್ಯವಾಗುತ್ತದೆಯೇ ಎಂದು ಶಂಕಿಸುತ್ತಾರೆ. ಆದರೆ ಅದರ ಬಗ್ಗೆ ಚಿಂತೆ ಬೇಡ. ಮಗುವಿಗೆ ಹೆಚ್ಚು ಹೆಚ್ಚು ಹಾಲುಣಿಸಲು ಪ್ರಾರಂಭಿಸಿದಾಗ, ನಿಮ್ಮ ಸ್ತನಗಳು ಮಗುವಿಗೆ ಹೆಚ್ಚು ಹಾಲು ಉತ್ಪಾದಿಸಲು ಪ್ರಾರಂಭಿಸುತ್ತವೆ. ಆದರೆ, ಹಾಲಿನ ಉತ್ಪಾದನೆ ಮುಂದುವರಿಯಬೇಕಾದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಪೌಷ್ಟಿಕ ಆಹಾರ ಸೇವನೆ ಮಾಡುವುದು ಕಡ್ಡಾಯ.
ನೆನಪಿಡಿ… ನಿಮ್ಮ ಮಗುವಿಗೆ ಆಹಾರ ನೀಡಲು ಅತ್ಯುತ್ತಮ ಸ್ಥಾನವೆಂದರೆ ನಿಮ್ಮ ಮಡಿಲು ಮತ್ತು ಬೆಚ್ಚನೆಯ ನಿಮ್ಮ ಸಾಮಿಪ್ಯ.