ವೇದಮಂತ್ರದಲ್ಲಿ ಮೊದಲು ಹೇಳುವದು “ಮಾತೃದೇವೋ ಭವ”, ನಂತರ “ಪಿತೃದೇವೋ ಭವ”. ಅಂದರೆ ವೇದಗಳಲ್ಲಿ ಉಕ್ತವಾದ ಮಂತ್ರಗಳು ನಮ್ಮ ಮನುಕುಲದಲ್ಲೇ ಪ್ರಾಚೀನ ಎಂದು ಎಲ್ಲರೂ ನಂಬಿಕೊಂಡ ಬಂದ ಸತ್ಯ. ಅಂಥಾ ವೇದಗಳಲ್ಲಿ ಮಾತೃವಿಗೆ ಮೊದಲ ಸ್ಥಾನ ಕೊಟ್ಟಿರುವುದು ನಮ್ಮ ಹಿಂದೂ ಸನಾತನ ಸಂಸ್ಕೃತಿಯ ಪ್ರತೀಕ.
ಹುಟ್ಟು ಸಾವಿನ ಈ ಜೀವನ ಚಕ್ರದಲ್ಲಿ ಜೀವಿ ಭೂಮಿಯಲ್ಲಿ ಹುಟ್ಟಬೇಕಾದರೆ ದೇವಲೋಕದಿಂದ ಜೀವಿ ಮೊದಲು ಮೋಡದಲ್ಲಿ ನಂತರ ಮಳೆ ರೂಪದಲ್ಲಿ ಭೂಮಿಗೆ ಇಳಿಕೆ – ಭೂಮಿ ಆ ಜೀವಿಯನ್ನ ಧಾನ್ಯಕ್ಕೆ ವರ್ಗಾವಣೆ, ಧಾನ್ಯದಿಂದ ಪುರುಷನ ಉದರದಲ್ಲಿ ಮೂರೂ ತಿಂಗಳ ವಾಸ. ನಂತರ ಪುರುಷನಿಂದ
ಹೆಣ್ಣಿನ ಗರ್ಭಪ್ರವೇಶ. ಒಂಬತ್ತು ತಿಂಗಳು ಗರ್ಭಾವಸ್ಥೆಯಲ್ಲಿ ಬೆಳವಣಿಗೆ ಆನಂತರ ಹುಟ್ಟು.
ಒಂದು ಜೀವಿ ಗರ್ಭ ಪ್ರವೇಶದಿಂದ ಹುಟ್ಟುವವಗೆ ಒಂಭತ್ತು ತಿಂಗಳು, ಆ ಒಂಭತ್ತು ತಿಂಗಳನ್ನ ಮೂರೂ ಭಾಗ ಮಾಡಿ ಮೊದಲ ಮೂರು ತಿಂಗಳಲ್ಲಿ ಹೃದಯ ಬಡಿತ, ಅವಯವಗಳ ಮೂಡುವಿಕೆಯ ಈ ಸಮಯ ತಾಯಿಯ ದೇಹದಲ್ಲಿ ಆಗುವ ಕ್ಷಿಪ್ರಬದಲಾವಣೆಗೆ, ವಾಕರಿಕೆ, ವಾಂತಿ ಮಧ್ಯದಲ್ಲೇ ತನ್ನ ದೇಹದಲ್ಲಿ ಇರುವ ಎಲ್ಲಾ ಪೌಷ್ಟಿಕತೆಯನ್ನು ಮಗುವಿಗೆ ಧಾರೆಯೆರೆಯುತ್ತಾಳೆ ತಾಯಿ. ಮುಂದಿನ ಮೂರೂ ತಿಂಗಳು ಮಗುವಿನ ಮನಸ್ಸು, ದೇಹರಚನೆ, ಸರ್ವತೋಮುಖ ಬೆಳವಣಿಗೆಗೆ ಬೇಕಾಗುವ ಪದಾರ್ಥಗಳನ್ನು ತನಗೆ ಬೇಡವಾಗಿದ್ದರೂ ತಿಂದು ತಾಯಿ ಮಗುವಿನ ಆರೈಕೆ ಮಾಡುತ್ತಾಳೆ. ಮುಂದಿನ ಮೂರುತಿಂಗಳು ಬೆಳವಣಿಗೆಯಾದ ಮಗುವನ್ನು ಉದರದಲ್ಲಿ ಹೊತ್ತು , ಊಟ, ತಿಂಡಿ, ನೀರು ಅಲ್ಪ ಸೇವನೆಗೆ ಮಾತ್ರ ಇದ್ದ ಸ್ಥಳವನ್ನು ಉಪಯೋಗಿಸಿ, ತನ್ನ ದೇಹದಲ್ಲಿ ಆದ ಎಲ್ಲಾ ಬದಲಾವಣೆ ಸಹಿಸಿಕೊಂಡು, ನೋವಿನ ಮಧ್ಯದಲ್ಲೇ ಜೀವಿನನ್ನು ಹೆರುತ್ತಾಳೆ. ಹೆರುವ ಸಮದಲ್ಲಿ ಎಷ್ಟೇ ನೋವಿದ್ದರೂ ಹುಟ್ಟಿದ ಮಗುವಿನ ನಗುವಿನಲ್ಲಿ ತನ್ನ ನೋವನ್ನು ಮರೆತು ಮಗುವಿನ ಆರೈಕೆಯಲ್ಲಿ ತೊಡಗುತ್ತಾಳೆ.
ಒಂದು ಜೀವಿ ಭೂಮಿಯ ಮೇಲೆ ಹುಟ್ಟಬೇಕಾದರೆ ತಾಯಿಯ ಪಾತ್ರ ಎಷ್ಟಿದೆ ಹಾಗು ತಾಯಿ ಉದರದಲ್ಲಿ ಮತ್ತೆ ನಂತರದಲ್ಲಿ ಮಗುವಿನ ಬೆಳವಣಿಗೆಯಲ್ಲಿ ತಾಯಿ ನಿರ್ವಹಿಸುವ ಪಾತ್ರ ಅಸಾಧಾರಣ. ಅಷ್ಟಕ್ಕೇ ತಾಯಿಯ ಪಾತ್ರ ಮುಗಿಯುವುದಿಲ್ಲ. ಮಗುವಿನ ಮೊದಲ ತೊದಲು ಕಲಿಸುವ ತಾಯಿ, ಮೊದಲ ಗುರುವಾಗಿ, ಮಗುವನ್ನು ತಿದ್ದಿ ತೀಡುವ, ಮಗುವಿನ ವಿದ್ಯಾ, ಕೆಲಸ, ಮದುವೆ ನಂತರ ಮೊಮ್ಮಕ್ಕಳನ್ನ ನೋಡಿಕೊಳ್ಳುವ ಅಭೂತಪೂರ್ವ ಕೆಲಸಗಳು ತಾಯಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಾಳೆ. ಈ ಎಲ್ಲಾ ಕಾರಣಗಳಿಂದ ವೇದಗಳು, ಪುರಾಣಗಳು ತಾಯಿಗೆ ಮೊದಲ ಸ್ಥಾನ ನೀಡಿವೆ.
ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸಿಯಾದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ ಎಂದು ವೇದಗಳು ಸಾರುತ್ತವೆ. ತಂದೆ ಇಂದ ನಮಸ್ಕಾರ ಮಾಡಿಸಿಕೊಳ್ಳುವ ಸನ್ಯಾಸಿ, ತಾಯಿಗೆ ಮಾತ್ರ ಯಾವುದೇ
ಅವಸ್ಥೆಯಲ್ಲಿ ಇದ್ದರೂ ನಮಸ್ಕರಿಸುವ ಹಾಗು ತಾಯಿಯನ್ನು ಆಕೆಯು ಇರುವವಗೆಗೂ ಸೇವೆ ಮಾಡುವ ಹಾಗು ನೋಡಿಕೊಳ್ಳುವ ಜವಾಬ್ದಾರಿ ಸನ್ಯಾಸಿಗೆ
ಇದೆ ಎನ್ನುವ ಮೇಲ್ಪಂಕ್ತಿ ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಇದೆ. ನಿತ್ಯದಲಿ ತಾಯಿಗೆ ನಮಸ್ಕರಿಸಿ ಮುಂದಿನ ಕೆಲಸ ಕಾರ್ಯಗಳನ್ನು ಮಾಡಲು ಕಲಿಸುವ ನಮ್ಮ ಸನಾತನ ಹಿಂದೂ ಸಂಸ್ಕೃತಿಯೇ ಶ್ರೇಷ್ಠ. ದಿನನಿತ್ಯದ ದೇವರ ಪೂಜಾ ಆಚರಣೆ ವಿಷಯದಲ್ಲಿ ಕೊಂಚ ಕಮ್ಮಿಯಾದರು ತೊಂದರೆ ಇಲ್ಲ. ಆದರೆ ಇಳಿವಯಸ್ಸಿನ ತಂದೆ ತಾಯಿಯರ ಸೇವೆ, ಅವರನ್ನು ನಿಮ್ಮ ನಿಮ್ಮ ಮನೆಯೆಲ್ಲಿಯೇ ಚನ್ನಾಗಿ ನೋಡಿಕೊಳ್ಳುವುದು ಅತೀ ಮುಖ್ಯ.