ತಮಿಳುನಾಡು ರಾಜ್ಯಪಾಲರು ಸಚಿವರೊಬ್ಬರನ್ನು ವಜಾ ಮಾಡಿ ತಮ್ಮದೇ ಆದೇಶಕ್ಕೆ ತಡೆ ನೀಡಿದ್ದು ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ನೇರ ವಾಗ್ವಾದ ಹಲವು ತಿಂಗಳುಗಳಿಂದ ನಡೆಯುತ್ತಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ. ರಾಜ್ಯಪಾಲರನ್ನು ನೇಮಕ ಮಾಡುವಾಗ ಕೇಂದ್ರ ಸರ್ಕಾರ ರಾಜ್ಯದ ಅಭಿಪ್ರಾಯ ಪಡೆಯಬೇಕೆಂದು ನಿಯಮ ಹೇಳುತ್ತದೆ. ಇದು ಈಗ ಸಮರ್ಪಕವಾಗಿ ನಡೆಯುತ್ತಿಲ್ಲ. ಕೇಂದ್ರದವರು ರಾಜ್ಯಪಾಲರನ್ನು ನೇಮಿಸುವ ಮುನ್ನ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯಪಾಲರು ಕೇಂದ್ರದ ಏಜೆಂಟರಂತೆ ಕೆಲಸ ಮಾಡುತ್ತಾರೆ ಎಂಬ ಆರೋಪ ಎಲ್ಲ ರಾಜ್ಯಗಳಿಂದಲೂ ಕೇಳಿ ಬರುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ರಾಜಕೀಯ ಪಕ್ಷ ಆಡಳಿತದಲ್ಲಿದ್ದರೆ ಸಮಸ್ಯೆ ಇರುವುದಿಲ್ಲ. ಇದನ್ನು ಪ್ರಧಾನಿ ಹಲವು ಬಾರಿ ಡಬ್ಬಲ್ ಎಂಜಿನ್ ಸರ್ಕಾರ ಎಂದು ಹೇಳಿದ್ದಾರೆ. ಆದರೆ ನಮ್ಮ ದೇಶದಲ್ಲಿ ಒಂದೇ ರಾಜಕೀಯ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಇರುವುದು ಅಪರೂಪ. ಅಪೇಕ್ಷಿಸಲೂ ಬರುವುದಿಲ್ಲ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಆಡಳಿತಕ್ಕೆ ಬರುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ ಈಗ ಮೈತ್ರಿಕೂಟಗಳು ತಲೆಎತ್ತುವುದು ಸಾಮಾನ್ಯ ಸಂಗತಿಯಾಗುತ್ತಿದೆ. ಅದೇರೀತಿ ರಾಜ್ಯ ಸರ್ಕಾರದಲ್ಲೂ ಒಂದೇ ರಾಜಕೀಯ ಪಕ್ಷ ಆಡಳಿತಕ್ಕೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಇಂಥ ರಾಜಕೀಯ ಸನ್ನಿವೇಶದಲ್ಲಿ ರಾಜ್ಯಪಾಲರ ಪಾತ್ರ ಅತ್ಯಂತ ಸೂಕ್ಷ್ಮವಾಗುತ್ತಿದೆ. ರಾಜ್ಯಪಾಲರು ರಾಷ್ಟ್ರಪತಿಯ ಪ್ರತಿನಿಧಿ ಎಂದು ಹೇಳಿದರೂ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಕೆಲಸ ಮಾಡುವುದು ರೂಢಿ. ರಾಜ್ಯದ ಕಾನೂನು ಪರಿಸ್ಥಿತಿ ಹದಗೆಟ್ಟಾಗ ಕೇಂದ್ರ ಗೃಹ ಖಾತೆ ರಾಜ್ಯಪಾಲರಿಂದ ವರದಿ ಬಯಸುತ್ತದೆ. ಹೀಗಾಗಿ ರಾಜ್ಯಪಾಲರು ಒಂದು ಕಡೆ ರಾಜಕೀಯ ಒತ್ತಡ ಮತ್ತೊಂದು ಕಡೆ ಸಂವಿಧಾನದ ರಕ್ಷಣೆಗೆ ಆದ್ಯತೆ ನೀಡುವುದು ಅಗತ್ಯ. ರಾಷ್ಟ್ರಪತಿಗಿಂತ ರಾಜ್ಯಪಾಲರಿಗೆ ಕೆಲವು ವಿವೇಚನಾ ಅಧಿಕಾರವೂ ಇರುತ್ತದೆ. ಅದನ್ನು ಯಾರೂ ಪ್ರಶ್ನಿಸಲು ಬರುವುದಿಲ್ಲ. ಆದರೆ ರಾಜ್ಯಪಾಲರು ಚುನಾಯಿತ ಸರ್ಕಾರದ ತೀರ್ಮಾನಗಳಿಗೆ ವಿರುದ್ಧವಾಗಿ ವರ್ತಿಸಲು ಬರುವುದಿಲ್ಲ. ಸಂವಿಧಾನಕ್ಕೆ ಧಕ್ಕೆ ಒದಗಿದರೆ ಮಾತ್ರ ರಾಜ್ಯಪಾಲರು ಸಂಪುಟಕ್ಕೆ ಮಾರ್ಗದರ್ಶನ ನೀಡಬಹುದು. ಈಗ ತಮಿಳು ನಾಡು ಸರ್ಕಾರ ನೀಡಿದ ಸಲಹೆಯನ್ನು ರಾಜ್ಯಪಾಲರು ಸ್ವೀಕರಿಸುತ್ತಿಲ್ಲ. ಅದೇ ರೀತಿ ರಾಜ್ಯಪಾಲರು ಕೈಗೊಂಡ ಕ್ರಮವನ್ನು ಸರ್ಕಾರ ಒಪ್ಪಿಲ್ಲ. ಇದು ಈಗ ಹಣಾಹಣಿ ಹಂತ ತಲುಪಿದೆ. ಕೇಂದ್ರ ಸರ್ಕಾರ ಇನ್ನು ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ. ಸರ್ಕಾರಿಯಾ ಆಯೋಗ ರಾಜ್ಯಪಾಲರ ಅಧಿಕಾರ ಮತ್ತು ರಾಜ್ಯ ಸರ್ಕಾರದೊಂದಿಗೆ ಇರಬೇಕಾದ ಸಂಬಂಧದ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ. ಹಿಂದೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಇದೇರೀತಿ ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ಬಗ್ಗೆ ಚರ್ಚೆ ನಡೆದಿತ್ತು. ಎಲ್ಲ ರಾಜ್ಯ ಸರ್ಕಾರಗಳು ಹೆಚ್ಚು ಅಧಿಕಾರ ಬಯಸುವುದು ಸಹಜ. ಅಲ್ಲದೆ ಹೆಚ್ಚು ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಬಯಸುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತಿಕ್ಕಾಟ ಹಿಂದಿನಿಂದಲೂ ನಡೆಯುತ್ತಬಂದಿದೆ. ಇದಕ್ಕೆ ಪರಿಹಾರ ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿ ಹಾಗೂ ರಾಜ್ಯಪಾಲರ ಪಾತ್ರದ ಬಗ್ಗೆ ಹೆಚ್ಚು ಪಾರದರ್ಶಕತೆ ತರುವುದು ಅಗತ್ಯ. ಇದರ ಬಗ್ಗೆ ಚರ್ಚೆ ನಡೆಯಬೇಕು. ಹಲವು ಬಾರಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳೇ ಕಾನೂನು ಸ್ವರೂಪ ಪಡೆಯುತ್ತವೆ. ಹೀಗಾಗಿ ಶಾಸಕಾಂಗ ಮತ್ತು ಸಂಸತ್ತು ಮಾಡಬೇಕಾದ ಕೆಲಸವನ್ನು ಪ್ರಜಾಪ್ರಭುತ್ವದ ಇತರ ಅಂಗಗಳು ನಿರ್ದೇಶಿಸಬೇಕಾದ ಪರಿಸ್ಥಿತಿ ಬಂದಿದೆ. ಪ್ರಜಾತಂತ್ರದಲ್ಲಿ ಎಲ್ಲ ಅಂಗಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು. ಈಗ ಶಾಸನ ರಚಿಸುವುದು ಶಾಸನಸಭೆ ಮತ್ತು ಸಂಸತ್ತಿನ ಕರ್ತವ್ಯ. ಕಾರ್ಯಾಂಗ ಅದನ್ನು ಜಾರಿಗೆ ತರಬೇಕು. ನ್ಯಾಯಾಂಗ ಸಂವಿಧಾನಬದ್ಧವಾಗಿ ನಡೆಯುತ್ತಿದೆಯೇ ಇಲ್ಲವೆ ಎಂಬುದನ್ನು ನೋಡಿಕೊಳ್ಳಬೇಕು. ಈಗ ಒಂದು ಅಂಗದ ಕೆಲಸದಲ್ಲಿ ಮತ್ತೊಂದು ಅಂಗ ಮಧ್ಯಪ್ರವೇಶಿಸಬೇಕಾದ ಪರಿಸ್ಥಿತಿ ಬಂದಿದೆ. ರಾಜ್ಯಪಾಲರ ಕೆಲಸದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಈಗ ಈ ಕೆಲಸ ನಡೆಯುತ್ತಿಲ್ಲ. ಸುಪ್ರೀಂ ಕೋರ್ಟ್ ನೀಡುವ ತೀರ್ಮಾನದಂತೆ ಕಾಯ್ದೆ ರಚಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ರಾಜ್ಯಪಾಲರು- ರಾಜ್ಯ ಸರ್ಕಾರ- ಕೇಂದ್ರ ಗೃಹ ಖಾತೆಗಳ ನಡುವೆ ಸಾಮರಸ್ಯ ಕಂಡು ಬರುತ್ತಿಲ್ಲ. ತಮಿಳುನಾಡಿನ ರಾಜ್ಯಪಾಲರು ಹಲವು ಸಂವಿಧಾನಾತ್ಮಕ ಪ್ರಶ್ನೆಗಳನ್ನೆತ್ತಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇದರಲ್ಲಿ ರಾಜಕೀಯ ವಾಸನೆ ಹುಡುಕುವ ಬದಲು ಸಂವಿಧಾನಬದ್ಧವಾಗಿ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಒಂದು ವಿವಾದದಿಂದ ಮತ್ತೊಂದು ವಿವಾದಕ್ಕೆ ಹೋಗುವುದು ಈಗಿನ ಜಾಯಮಾನವಾಗಿ ಹೋಗಿದೆ. ಯಾವುದೇ ವಿವಾದ ಇರಲಿ. ಮೊದಲು ಅದನ್ನು ಬಗೆಹರಿಸಿಕೊಳ್ಳಬೇಕು. ಸಮಸ್ಯೆಗಳ ಸರಮಾಲೆ ಸೃಷ್ಟಿಸುವುದು ಸರಿಯಲ್ಲ. ಜನಸಾಮಾನ್ಯರಲ್ಲಿ ಇದರಿಂದ ರಾಜ್ಯ ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ ಎಂಬ ಭಾವನೆ ಮೂಡುವುದು ಸಹಜ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷ ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಆತಂಕ ತರಲಿದೆ. ಯಾವುದೇ ಪಕ್ಷದ ಅಧಿಕಾರವಿರಲಿ. ಆಡಳಿತ ಸಂವಿಧಾನಬದ್ಧವಾಗಿ ನಡೆದಲ್ಲಿ ಸಮಸ್ಯೆ ಇರುವುದಿಲ್ಲ. ಈಗ ತಮಿಳುನಾಡು ರೀತಿ ಹಲವು ರಾಜ್ಯಗಳಲ್ಲಿ ಸಮಸ್ಯಗಳು ತಲೆದೋರಿವೆ. ಇದರಿಂದ ಜನಸಾಮಾನ್ಯರ ನೆಮ್ಮದಿ ಹಾಳಾಗುತ್ತಿದೆ. ಜನ ಸಾಮಾನ್ಯರ ಕಲ್ಯಾಣ ಬಯಸುವುದೇ ಎಲ್ಲ ಸರ್ಕಾರಗಳ ಉದ್ದೇಶವಾಗಿದ್ದರೆ ಇಂದಿನ ಸಮಸ್ಯೆಗಳು ದೊಡ್ಡದಾಗಬಾರದು.