ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ವಿರುದ್ಧ ” ಕತ್ತೆ” ಚಳವಳಿ

Advertisement

ಮಂಡ್ಯ: ಕೃಷ್ಣರಾಜಸಾಗರದಿಂದ ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ರೈತರು ಅರೆಬೆತ್ತಲೆಯಾಗಿ ಕತ್ತೆ ಚಳವಳಿ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕತ್ತೆಗಳನ್ನು ಹಿಡಿದುಕೊಂಡು ಅವುಗಳಿಗೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಎಂದು ನಾಮಕರಣ ಮಾಡಿ ಆಕ್ರೋಶಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದ ರೈತರು ಕೆ ಆರ್ ಎಸ್ ನಿಂದ ನೀರು ಬಿಡುವ ಮೂಲಕ ರೈತರ ಜೀವನಕ್ಕೆ ಕಂಟಕರಾಗಿದ್ದಾರೆ ಎಂದು ಆಕ್ರೋಶಿಸಿದರು.
ರೈತರ ಪಾಲಿಗೆ ಮಂಡ್ಯ ಜಿಲ್ಲೆಯ ಶಾಸಕರು, ಸಂಸದರು ಸತ್ತು ಹೋಗಿದ್ದಾರೆ, ನೀರು ಬಿಡುತ್ತಿದ್ದರೂ ಬಾಯಿ ಮುಚ್ಚಿಕೊಂಡಿದ್ದು,ತಮ್ಮ ಪಕ್ಷದ ಸರ್ಕಾರದ ಬೆಂಬಲಕ್ಕೆ ನಿಲ್ಲುವ ಮೂಲಕ ರೈತರಿಗೆ ದ್ರೋಹ ಮಾಡಿದ್ದಾರೆಂದು ಆರೋಪಿಸಿದರು.
ಕೆ ಆರ್ ಎಸ್ ನಿಂದ 5,000ಕ್ಕೂ ಹೆಚ್ಚುಕ್ಯೂ ಸೆಕ್ ನೀರನ್ನು ಹರಿದು ಬಿಡಲಾಗಿದೆ, ಆದರೆ ಜಿಲ್ಲಾ ಉಸ್ತುವಾರಿ ಸಚಿವರು 3000 ಕ್ಯೂ ಸೆಕ್ ನೀರು ಹರಿದು ಹೋಗುತ್ತಿದೆ ಎಂದು ಸುಳ್ಳು ಹೇಳಿದ್ದಾರೆ, ನಿರಂತರವಾಗಿ ನೀರು ಹರಿಸಿದ ಪರಿಣಾಮ ಜಲಾಶಯದಲ್ಲಿ ನೀರು ಬರಿದಾಗಿದೆ, ಮತ್ತೆ 15 ದಿನ ನೀರು ಬಿಟ್ಟರೆ ರೈತರ ಗತಿಯೇನು, ಕುಡಿಯಲು ನೀರು ಸಿಗುವುದೇ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರು ಪ್ರಾಧಿಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹದ ಬಗ್ಗೆ ಖುದ್ದಾಗಿ ಭೇಟಿ ನೀಡಿ ಅರಿಯದೆ ನೀರು ಬಿಡಿ ಎಂದು ಆದೇಶ ಮಾಡುತ್ತಿದೆ, ಕಳೆದೊಂದು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ, ಈ ಕೂಡಲೇ ಮಧ್ಯ ಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಚಂದ್ರಶೇಖರ್ ಶಿವಳ್ಳಿ, ಸುರೇಶ ಗೋಪಾಲ ಪುರ, ನಾಗರಾಜು ಚಿಕ್ಕ ಮಂಡ್ಯ, ದಿನೇಶ್, ಜವರೇಗೌಡ, ನಾಗರಾಜು ಗಾಣದಾಳು, ವಿಜಯಕುಮಾರ್, ಹೊಳಲು ಶಿವರಾಂ ನೇತೃತ್ವ ವಹಿಸಿದ್ದರು.