ತಬ್ಬಲಿಯಾಗದಿರಲಿ `ಪುಣ್ಯಕೋಟಿ’

ಜನಾಶಯ
Advertisement

ಪುಣ್ಯಕೋಟಿ ದತ್ತು ಪಡೆಯುವ ಯೋಜನೆಯನ್ನು ಆರಂಭಿಸಿದ್ದೇವೆ. ಈಗಾಗಲೇ ಸುಮಾರು ನೂರು ಕೋಟಿ ರೂಪಾಯಿ ಹರಿದು ಬಂದಿದೆ. ಗೋವುಗಳ ಸಂರಕ್ಷಣೆಗೆ ನಮ್ಮ ಆದ್ಯತೆ'. ಕೊಲ್ಹಾಪುರ ಕನ್ಹೇರಿ ಮಠದಲ್ಲಿ ಸಂತರು, ಸಾಧುಗಳ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಘೋಷಣೆ ಮಾಡುತ್ತಿದ್ದಂತೇ ಗ್ರಾಮೀಣ ಭಾಗದಲ್ಲಿ ಹೊಸ ಆಶಾ ಭಾವನೆ ಮೂಡಿದ್ದರೆ, ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಪರಿಣಿತರು ಇನ್ನಷ್ಟು ಚಿಂತಿತರಾಗಿದ್ದಾರೆ. ಬಹುಶಃ ದೇಶ ಮತ್ತು ರಾಜ್ಯದಲ್ಲಿಗೋ ಹತ್ಯೆ ತಡೆ ಮತ್ತು ಜಾನುವಾರ ಸಂರಕ್ಷಣೆ ಕಾಯ್ದೆ’ ಜಾರಿಯಾಗಿ, ಇಷ್ಟು ಅತ್ಯಲ್ಪ ಅವಧಿಯಲ್ಲೇ ವ್ಯಾಪಕ ಚರ್ಚೆ ಹಾಗೂ ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳು ಬೇರೆಯವಕ್ಕೆ ಎದುರಾಗಿರಲಿಲ್ಲವೇನೋ?ಊಳುವವನೇ ಒಡೆಯ, ಭೂ ಸುಧಾರಣೆ ಕಾಯ್ದೆಗಳನ್ನು ಅನುಷ್ಟಾನಗೊಳಿಸುವಾಗಲೂ ಕೂಡ ಇಷ್ಟೊಂದು ಸ್ಥಿತ್ಯಂತರಗಳು ಕಾಣಲಿಲ್ಲ.
ಈಗ ಪುಣ್ಯಕೋಟಿ ದತ್ತು ಯೋಜನೆಯಡಿ ನೂರು ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಇದು ನೂರು ಕೋಟಿ ರೂಪಾಯಿಗೇ ಸೀಮಿತವೇ? ಇಷ್ಟೇ ಸಾಕೇ? ಎನ್ನುವುದು ಒಂದು ಪ್ರಶ್ನೆ ಮತ್ತು ಲೆಕ್ಕಾಚಾರ. ಜೊತೆಗೆ ಮುಂದೆಯೂ ದತ್ತು ಪಡೆದವರು ಇಷ್ಟೇ ಹಣ ಕೊಡುತ್ತಾರೆಂಬ ಗ್ಯಾರಂಟಿಯೇನಿಲ್ಲ. ಒಂದು ವರ್ಷಕ್ಕೆ ಒಂದು ಗೋವಿಗೆ ಹತ್ತು ಸಾವಿರ ರೂಪಾಯಿಯಂತೆ ಪುಣ್ಯಕೋಟಿಯನ್ನು ದತ್ತು ಪಡೆಯಬೇಕು. ಇದಕ್ಕಾಗಿಯೇ ಖ್ಯಾತ ನಟ ಸುದೀಪ ಅವರನ್ನು ರಾಯಭಾರಿಯನ್ನಾಗಿಯೂ ನೇಮಿಸಲಾಗಿದೆ. ಸಹೃದಯ ಮತ್ತು ಸಾಮಾಜಿಕ ಕಳಕಳಿ ಇರುವ ಸುದೀಪ್ ಉಚಿತವಾಗಿ ಪುಣ್ಯಕೋಟಿ ರಾಯಭಾರಿಯಾಗಿದ್ದಾರೆ ನಿಜ. ಪ್ರಥಮ ವರ್ಷದ ಉಮೇದಿಗೆ ಜನ, ಪ್ರತಿಷ್ಟಿತರು, ಕೆಲ ಕಂಪನಿಗಳು ದತ್ತು ಸ್ವೀಕರಿಸಿರಬಹುದು. ಮುಂದೆ? ಆದರೆ ನೂರು ಕೋಟಿ ಇದಕ್ಕೆ ಖಂಡಿತ ಸಾಲದು.
ಗೋಹತ್ಯೆ ನಿಷೇಧ ಕಾನೂನು- ೨೦೨೦, ಜನವರಿ-೨೦೨೧ರಲ್ಲಿ ಅಂಗೀಕಾರಗೊಂಡು, ವಿವಿಧ ಷರತ್ತು, ಕಟ್ಟಳೆಗಳೊಂದಿಗೆ ಆದೇಶವೂ ಆಗಿದೆ. ೨೦೨೧ರ ಬಜೆಟ್‌ನಲ್ಲಿ ೨೦೦ ಗೋಶಾಲೆ ಸ್ಥಾಪಿಸುವ, ಅನುಪಯುಕ್ತ ಮುದಿ ಹಸು-ಎಮ್ಮೆಗಳನ್ನು ಸಂರಕ್ಷಿಸುವ, ಸಾರ್ವಜನಿಕರು, ಮಠಾಧೀಶರು ಮತ್ತು ದಾನಿಗಳ ಸಹಾಯದೊಂದಿಗೆ ದನ ಕರುಗಳು, ವಿಶೇಷವಾಗಿ ಹೋರಿ-ಕೋಣ ಇವು ವಧಾಲಯ ಸೇರುವುದನ್ನು ತಪ್ಪಿಸುವ ವಾಗ್ದಾನ ಮಾಡಲಾಯಿತು.
ನ್ಯಾಯಾಲಯದಲ್ಲಿ ಹೋರಾಟ, ನಿರ್ದೇಶನ ಏನೇ ಇರಲಿ, ಈ ವಾಗ್ದಾನ ಈಡೇರಿಕೆಗೆ ನೂರೆಂಟು ತೊಡಕುಗಳು ಎದುರಾದವು ಎಂದು ಸಮರ್ಥನೆ ಮಾಡಿಕೊಳ್ಳಲಿ. ಆದರೆ ಗೋಹತ್ಯೆ ನಿಷೇಧ ಕಾಯ್ದೆ ಇನ್ನೂ ಪ್ರಾಥಮಿಕ ಹೆಜ್ಜೆಯನ್ನು ಇಡದ ಸ್ಥಿತಿ. ಅಲ್ಲದೇ ಪಶುಸಂಗೋಪನೆಯನ್ನೇ ನಂಬಿಕೊಂಡವರು ಇದರಿಂದ ಆತಂಕಕ್ಕೆ ಈಡಾಗಿದ್ದಾರೆ.
ಏಕೆಂದರೆ ರೈತರ ಪಾಲಿಗಂತೂ ಅನಗತ್ಯ ನಷ್ಟ ಮತ್ತು ಹೊರೆ. ಉದ್ಭವಿಸುವ ಬಿಕ್ಕಟ್ಟಿನ ಪರಿಹಾರ ಕಾಣುತ್ತಿಲ್ಲ. ಗೋಹತ್ಯೆ ಮತ್ತು ಮನುಷ್ಯನ ಹತ್ಯೆ ಎರಡೂ ಸಮ' ಎಂದು ಗಾಂಧೀಜಿ ಕೂಡ ಪ್ರತಿಪಾದಿಸಿದ್ದವರೇ. ದೇಶದ ಇಪ್ಪತ್ತೊಂದಕ್ಕೂ ಹೆಚ್ಚು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೆ ಅನುಷ್ಟಾನ ಮಾತ್ರ ಎಲ್ಲಿಯೂ ಸಮರ್ಪಕವಾಗಿಲ್ಲ. ಈಗ ಬಂದಿರುವುದು, ನೂರು ಕೋಟಿ ದತ್ತು ಯೋಜನೆಯಿಂದ ಅಥವಾ ಗೋಶಾಲೆಗಳಿಂದ ಜಾನುವಾರು ರಕ್ಷಣೆ ಸಾಧ್ಯವೇ? ಆ ಕರ್ತವ್ಯ ನಿರ್ವಹಿಸುವಲ್ಲಿ ಸರ್ಕಾರ ಸಫಲವಾದೀತೇ? ಎನ್ನುವುದು ಪ್ರಶ್ನೆ. ರಾಜ್ಯದ ಆರ್ಥಿಕ ಇಲಾಖೆ ಕೂಡ ಇದೇ ಪ್ರಶ್ನೆಯನ್ನು ಎತ್ತಿದೆ. ಗೋಹತ್ಯೆ ನಿಷೇಧ ಜಾರಿಗೆ ಬಂದ ಮೇಲೆ ಮುದಿ ಮತ್ತು ನಿರುಪಯುಕ್ತ ಗೋವುಗಳ ನಿರ್ವಹಣೆ ಸಮಸ್ಯೆ ಎದುರಾಗಿದೆ. ನಿರ್ವಹಿಸುವ ಅಪಾರ ವೆಚ್ಚ ಭರಿಸಲಾಗದೇ ಜನ ಇವನ್ನು ಬೀದಿಗೆ ಬಿಟ್ಟಾರು. ಇಲ್ಲವೇ ಮೇವು ಪೂರೈಸಲಾಗದೇ ಅವು ನರಳಿ ನರಳಿ ಸಾಯುವಂತಾದೀತು ಎನ್ನುವ ಬಗ್ಗೆ ಗಂಭೀರ ಆಲೋಚನೆ ಇಲ್ಲಿ ನಡೆಯುತ್ತಲೇ ಇಲ್ಲ. ಗೋವು ದೈವಿಸಂಭೂತ. ಭಾವನಾತ್ಮಕ ಬೇಸುಗೆ ಹೊಂದಿರುವ ಜನರ- ರೈತರ ನಿತ್ಯ ಸಂಗಾತಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ ಆರ್ಥಿಕ ದೃಷ್ಟಿಕೋನದಿಂದ ನೋಡಿದಾಗ ರೈತರಿಗೆ ಭಾರೀ ನಷ್ಟ ಉಂಟಾಗುತ್ತಿದೆ. ಗೋ ಹತ್ಯೆ ನಿಷೇಧ ಕಾಯ್ದೆಯ ವೇಳೆ ನಡೆದ ಸಮೀಕ್ಷೆಯಂತೆ ಕರ್ನಾಟಕದಲ್ಲಿ ಪ್ರಸ್ತುತ ೧,೮೧,೬೭೨ರಷ್ಟು ವಯಸ್ಸಾದ ಎಮ್ಮೆ, ಆಕಳು, ಗಂಡು ಕರು, ಹೋರಿ ಅಥವಾ ಎತ್ತುಗಳಿದ್ದಾವೆ. ಇವುಗಳ ನಿರ್ವಹಣೆಗೆ ಪ್ರತಿ ದಿನ ಒಂದು ಪಶುವಿಗೆ ೭೦ ರೂಪಾಯಿ ಅಗತ್ಯ. ಈ ಲೆಕ್ಕಾಚಾರದಲ್ಲಿ ವರ್ಷಕ್ಕೆ ೪೬೫ ಕೋಟಿ ರೂಪಾಯಿಯಷ್ಟು ಇವುಗಳ ಪೋಷಣೆಗೆ ಬೇಕು! ಇನ್ನು ಗೋಶಾಲೆ, ಅವುಗಳ ಆರೋಗ್ಯ ನಿರ್ವಹಣೆ ವೆಚ್ಚ ಪ್ರತ್ಯೆಕ. ಇದು ಕಸಾಯಿಖಾನೆಗೆ ಹೋಗುವುದನ್ನು ನಿಯಂತ್ರಿಸದರೆ ೫ ವರ್ಷಗಳಲ್ಲಿ ಸುಮಾರು ೫ ಸಾವಿರ ಕೋಟಿಗೂ ಅಧಿಕ ವೆಚ್ಚ ಭರಿಸಬೇಕಾಗುತ್ತದೆ. ಇದೊಂದು ಮುಖವಾದರೆ ಗೋಶಾಲೆ ನಿರ್ವಹಣೆಗೆ ಪ್ರತಿ ಜಿಲ್ಲೆಗೆ ೩೦ರಿಂದ ೪೦ ಲಕ್ಷ ರೂಪಾಯಿ ತಗಲುತ್ತದೆ. ೨೦೦ ಗೋಶಾಲೆಗಳನ್ನು ಸರ್ಕಾರ ತೆರೆದರೂ ಕೂಡ ಇವುಗಳ ಮೂಲಭೂತ ಸೌಕರ್ಯಕ್ಕೆ ೧೨೦೦ ಕೋಟಿ ತಗಲುತ್ತದೆ!. ವಾಸ್ತವ ಏನೆಂದರೆ, ಕರ್ನಾಟಕದ ದೊಡ್ಡ ಮಠವೊಂದು ಗೋಶಾಲೆಯನ್ನು ನಡೆಸುತ್ತಿದೆ. ಸರ್ಕಾರ ಪ್ರತಿ ಗೋವಿಗೆ ದಿನಕ್ಕೆ ೧೭ ರೂಪಾಯಿಯಂತೆ ಅಲ್ಲಿರುವ ಗೋವುಗಳಿಗೆ ಅನುದಾನ ನೀಡಬೇಕೆಂದು ಒಪ್ಪಂದವನ್ನು ಮಾಡಿಕೊಂಡಿದೆ. ಇದೇರೀತಿ ಕೆಲ ಗೋಶಾಲೆಗಳಿಗೂ ಅನುದಾನ ನೀಡುವ ಒಪ್ಪಂದ ಮಾಡಿಕೊಂದಿವೆ. ಆದಾಗ್ಯೂ ಒಂದು ವರ್ಷದಿಂದ ಅನುದಾನ ಯಾವುದೇ ಗೋಶಾಲೆಗೂ ಬಿಡುಗಡೆಯಾಗಿಲ್ಲ. ೨೦೦ ಗೋಶಾಲೆ ಘೋಷಣೆ ವಾಗ್ದಾನ ಮಾಡಿ ವರ್ಷದ ಮೇಲಾಯಿತು. ಈವರೆಗೆ ತೆರೆದದ್ದು ಎರಡು ಮಾತ್ರ. ಈಗ ಗೋಶಾಲೆಗಾಗಿ ಭೂಮಿ ಗೋಮಾಳ ಹುಡುಕುತ್ತಿದ್ದೇವೆ ಎನ್ನುತ್ತಿದೆ ಸರ್ಕಾರ. ಇದೊಂದು ಆರ್ಥಿಕವಾಗಿ ಜರ್ಝಿರತ ರಾಜ್ಯ. ಜನರ ಕಲ್ಯಾಣ ಸರ್ಕಾರ ಧ್ಯೇಯ. ಗೋಹತ್ಯಾ ನಿಷೇಧ ಕಾಯ್ದೆ ಜನಾಗ್ರಹದಿಂದಲೇ ಬಂದಿದ್ದು. ಇನ್ನೊಂದು ಮುಖವನ್ನು ಗಮನಿಸಿದಾಗ, ಕೊನೆಗೂ ಇಲ್ಲಿ ಬಡವಾಗುವವ, ಶೋಷಿತನಾಗುವವ, ನಷ್ಟಕ್ಕೊಳಗಾಗುವವ ರೈತ ಮತ್ತು ಹಾಲು ಮಾರುವವ. ಹೈನೋದ್ಯಮವನ್ನೇ ನಂಬಿಕೊಂಡು ಗ್ರಾಮೀಣ ಭಾಗದಲ್ಲಿ ದನ ಸಾಕುವವರು ಗಂಡು ಕರ ಏನು ಮಾಡಬೇಕು? ವಯಸ್ಸಾದ ಮೇಲೆ ಇವುಗಳ ವಿಲೇ ಹೇಗೇ? ಈ ಮೊದಲು ಒಂದು ಗ್ರಾಮದಿಂದ ಮತ್ತೊಂದೆಡೆ ಮಾರಾಟ ಮಾಡಬಹುದಿತ್ತು. ದನದ ಸಂತೆಗೆ ಬಂದು ವ್ಯಾಪಾರ ಮಾಡಬಹುದಿತ್ತು. ಕಾಯ್ದೆಯಿಂದಾಗಿ ಈಗ ಒಂದೂರಿಂದ ಇನ್ನೊಂದೂರಿಗೆ ಸ್ಥಳಾಂತರಿಸಲೂ ಪರವಾನಗಿ ಬೇಕು. ಆ ನಂತರ ಅದು ಕಸಾಯಿ ಖಾನೆಗೆ ಹೋಗುವುದಲ್ಲ ಎನ್ನುವ ಪ್ರಮಾಣ ಪತ್ರ ಪಡೆಯಬೇಕು. ಹಾಗೇನಾದರೂ ಅಕ್ರಮ ಸಾಗಾಟ ನಡೆದರೆ ದಂಡ ಮತ್ತು ಕಠಿಣ ಶಿಕ್ಷೆಗೆ ಒಳಗಾಗಬೇಕು. ಜಾನುವಾರುಗಳಿಗೆ ರೋಗ ತಾಪತ್ರಯ ಬಂದರೂ ಅವುಗಳಿಗೆ ಚಿಕಿತ್ಸೆ ಕಷ್ಟ. ಹಾಗಾಗಿ ಆತನ ದುಡಿಮೆ ಮತ್ತು ಉತ್ಪನ್ನ ಎರಡೂ ಅನುಪಯುಕ್ತ ಮುದಿ ದನಗಳ ಪೋಷಣೆಗೆ ವೆಚ್ಚವಾಗುತ್ತಿದೆ! ಒಂದೇ ವರ್ಷದಲ್ಲಿ ರೈತರಿಗೆ ಸಂಕಷ್ಟಕ್ಕೆ ನೂಕಿದೆ. ಕೃಷಿ ಉದ್ಯಮ ಮೊದಲು ಜನ-ಜಾನುವಾರುಗಳೆರಡನ್ನೂ ಒಳಗೊಂಡಿತ್ತು. ಆದರೆ ಆಧುನಿಕ ತಂತ್ರಜ್ಞಾನ ಹೊಲಗದ್ದೆಗಳಿಗೆ ಪ್ರವೇಶಿಸಿದ್ದರಿಂದ ಸಾಗುವಳಿಯಲ್ಲಿ ಈಗ ಎತ್ತು-ಕೋಣ-ಹೋರಿ ಬಳಕೆ ಇಲ್ಲ. ತೋಟ ಗದ್ದೆಗಳಿಗೆ ಸಗಣಿ, ಗೋಮೂತ್ರಗಳ ಬಳಕೆ ಮೊದಲಿತ್ತು. ಈಗ ಮೇವಿನ ಸಮಸ್ಯೆಯೂ ಉದ್ಭವವಾಗಿ ಗೋವು ಸಾಕುವವರೂ ಕಡಿಮೆ. ಹಾಗಾಗಿ ಹಾಲು ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ೨೪ ಲಕ್ಷ ರೈತ ಕುಟುಂಬಗಳಿಗೆ ಈ ಕಾಯ್ದೆ ಪರೋಕ್ಷವಾಗಿ ಮತ್ತು ನೇರವಾಗಿ ಸಂಕಷ್ಟವನ್ನೇ ತಂದಿದೆ. ಹಾಗಂತ ಹೈನೋದ್ಯಮವಾಗಲೀ, ಪುಣ್ಯಕೋಟಿಯಾಗಲೀ, ಗೋ ಹತ್ಯೆ ನಿಷೇಧ ಕಾಯ್ದೆಯಾಗಲೀ ತಪ್ಪು ಎಂದು ತರ್ಕಿಸಲಾಗದು. ಗೋ ಸಂರಕ್ಷಣೆ, ಗೋವಿನ ತಳಿ, ಗೋಶಾಲೆ, ಗೋವಿನ ಉತ್ಪನ್ನಗಳು, ಅದರ ಪರಿಣಾಮಗಳೆಲ್ಲವೂ ಜನಸಾಮಾನ್ಯರಿಗೆ ಗೊತ್ತು. ಆದರೆ ಆರ್ಥಿಕವಾಗಿ ಪರಿಗಣಿಸುವ ರೈತ ಇದಕ್ಕಿಂತಲೂ ಹೆಚ್ಚು ನಷ್ಟವನ್ನೇ ಅನುಭವಿಸಬೇಕಲ್ಲ ಎನ್ನುವುದು ಸಮಸ್ಯೆ. ಈ ಮಧ್ಯೆ ಮನುಷ್ಯರ ರೋಗ ರುಜುನೆಗಿಂತ ಜಾನುವಾರುಗಳ ರೋಗ, ಆಹಾರದ ವೆಚ್ಚವೇ ಅಧಿಕ. ಭಾವನೆಗಳು ಹೊಟ್ಟೆ ತುಂಬಿಸುವುದಿಲ್ಲ. ಕುಟುಂಬದ ನಿರ್ವಹಣೆಯೇ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ದನ ಸಕುವ ಜಂಜಾಟಕ್ಕಿಂತ ಸ್ವಲ್ಪ ವೆಚ್ಚವಾದರೂ ಸರಿ, ಹಾಲು ಹೈನವನ್ನು ಕೊಂಡುಕೊಳ್ಳುವುದೇ ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನೊಂದು ಪ್ರಶ್ನೆ, ಕಳೆದೊಂದು ವರ್ಷದಲ್ಲಿ ಗೋಮಾಂಸ ದಂಧೆಯಲ್ಲಿ ತೊಡಗಿರುವವರು, ಅದರ ಚರ್ಮ-ಎಲುಬು, ಮಾಂಸಗಳ ವ್ಯವಹಾರದಲ್ಲಿ ಇದ್ದವರ ಸಂಕಷ್ಟ. ಸರ್ಕಾರಿ ಅಂಕಿ ಸಂಖ್ಯೆಗಳ ಪ್ರಕಾರವೇ ೨೦-೨೧ನೇ ಸಾಲಿಗೆ ೨೭ ಸಾವಿರ ಕೋಟಿ ರೂ. ಮೌಲ್ಯದ ಗೋ ಮಾಂಸ ಕರ್ನಾಟಕದಿಂದ ರಫ್ತಾಗಿದೆ! ಎಂದರೆ, ಗೋಹತ್ಯೆ ನಿಷೇಧ ಜಾರಿ ನಂತರ ಗೋಮಾಂಸ ರಫ್ತು ಹೆಚ್ಚಾಗಿದೆ! ಆದರೆ ಸತ್ತ ದನ, ಎಮ್ಮೆ, ಎತ್ತಿನ ಚರ್ಮ, ಎಲುಬು ವ್ಯವಹಾರ ಮಾಡುತ್ತಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಕೊಲ್ಹಾಪುರಿ ಚಪ್ಪಲಿ ದನಗಳ ಚರ್ಮದಿಂದಲೇ ಮಾಡುವುದು. ಚರ್ಮ ಸುಲಿಯುವ ಸಮುದಾಯವೇ ಅಥಣಿ ತಾಲ್ಲೂಕಿನ ಹಲವೆಡೆ ಇದೆ. ಅವರಿಗೂ ಮುಂದಿನ ಭವಿಷ್ಯದ ಪ್ರಶ್ನೆ ಎದುರಾಗಿದೆ. ಈ ಮಾಂಸ, ಚರ್ಮದ ಉದ್ಯಮವನ್ನೇ ನಂಬಿ ಬದುಕುತ್ತಿರುವವರಿಗೆ ಪರಿಹಾರವಾಗಿ ೫೧೯ ಕೋಟಿ ರೂಪಾಯಿ ನೀಡಬೇಕಾದ ಜವಾಬ್ದಾರಿಯನ್ನು ಸರ್ಕಾರ ನಿಭಾಯಿಸುವುದೇ ಎನ್ನುವ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಗೋವಿನ ಬಗ್ಗೆ ಜನರಿಗೆ ಪೂಜ್ಯ ಭಾವನೆ ಇದೆ. ಕಾಮಧೇನು, ಮುಕ್ಕೋಟಿ ದೇವರು ನೆಲೆಸಿರುವ ಜೀವ ಎಂಬ ಭಾವನೆಗಳೆಲ್ಲವೂ ಇವೆ ನಿಜ. ಆದರೆ ಈ ವ್ಯಾವಹಾರಿಕ ಮತ್ತು ತಾಂತ್ರಿಕ ಯುಗದಲ್ಲಿ ಜನರ ಬದುಕು-ಹೊಟ್ಟೆಪಾಡು ಜಂಜಡದಲ್ಲಿ ಇವುಗಳ ನಿರ್ವಹಣೆ ಹೇಗೆ? ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದಿಟ್ಟುಕೊಳ್ಳೋಣ. ಮುದಿ ಸತ್ತ ದನಗಳ ನಿರ್ವಹಣೆ ಹೇಗೆ ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಜನರ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದಾಗ ಇದನ್ನು ಹೇಗೆ ನಿಭಾಯಿಸುವುದು? ಇಷ್ಟಕ್ಕೂ ಹಾಲು ಹಿಂಡುವವನ ಮೂಲಭೂತ ಪ್ರಶ್ನೆ, ಇಷ್ಟೆಲ್ಲ ಗೋವಿನ ಬಗ್ಗೆ, ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡುವವರು ಎಂದಾದರೂ ಗೋವು ಸಾಕಿದ್ದಾರಾ? ಹಾಲು ಕರೆದಿದ್ದಾರಾ? ನಿರ್ವಹಣೆ ಗೊತ್ತಾ? ಈ ಎಲ್ಲ ಪ್ರಶ್ನೆ ಬಿಡಿ. ಇವುಗಳ ಸಂರಕ್ಷಣೆಗಾಗಿ ಗೋಶಾಲೆ ಸ್ಥಾಪಿಸಿ ಸರ್ಕಾರ ಗೋವುಗಳ ನಿರ್ವಹಣೆಗೆ ಯೋಜನೆ ರೂಪಿಸುತ್ತದೆ ಎಂದು ಇಟ್ಟುಕೊಳ್ಳೋಣ. ಪುಣ್ಯಕೋಟಿ ಯೋಜನೆಗೆ ಕೇವಲ ನೂರು ಕೋಟಿ ಸಾಕೇ? ದತ್ತು ಪಡೆದವರು ವರ್ಷವಿಡೀ ನಿರ್ವಹಿಸುತ್ತಾರೆಯೇ?ಗೋಶಾಲೆಗಳನ್ನು ನೇರವಾಗಿ ಸರ್ಕಾರವೇ ನಿಭಾಯಿಸಲಿದೆಯೇ? ಯೋಜನೆಗೊಂದು ವ್ಯವಸ್ಥೆಯೇನು? ಎನ್ನುವ ಪ್ರಶ್ನೆಗಳಿಗೀಗ ಉತ್ತರ ಬೇಕಿದೆ. ಇಷ್ಟಾಗಿಯೂ ಗೋವು, ಗೋಶಾಲೆಗಳ ಸಮರ್ಪಕ ನಿರ್ವಹಣೆ ಲಾಭದಾಯಕವೂ ಹೌದು. ಗೋವಿನ ಉತ್ಪನ್ನಗಳು, ವಿಶೇಷವಾಗಿ ಗೊಬ್ಬರ, ಗೋಬರ ಗ್ಯಾಸ್ ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆಸಿ ಅತ್ಯುತ್ತಮ ಉದ್ಯಮಗಳನ್ನು ಸ್ಥಾಪಿಸಿದವರೂ ಇದ್ದಾರೆ. ಒಂದೆಡೆ ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪು ಹಾಸು ಹಾಕಿ ಸ್ವಾಗತಿಸಿ, ಅವುಗಳ ಉತ್ಪನ್ನಗಳ ಪ್ರಚಾರ-ಮಾರಾಟಕ್ಕೆ ಕೋಟ್ಯಂತರ ರೂಪಾಯಿಗಳನ್ನು ಚೆಲ್ಲಲು ಪರವಾನಗಿ ನೀಡುವ ಸರ್ಕಾರ, ಬಡಪಾಯಿ ಗೋ ಉತ್ಪನ್ನಗಳ ಮಾರಾಟಕ್ಕಾಗಲೀ, ಪ್ರಚಾರಕ್ಕಾಗಲೀ ವ್ಯವಸ್ಥೆ ಮಾಡುತ್ತದೆಯೇ? ಯೂರಿಯಾ-ಸಫಲಾ ರಾಸಾಯನಿಕ ಗೊಬ್ಬರಗಳನ್ನೇ ಹಾಕಿ ಎನ್ನುವ ಸರ್ಕಾರ, ದನಗಳ ಗೊಬ್ಬರದ ಬಗ್ಗೆ ಅಷ್ಟೆಲ್ಲ ಪ್ರಚಾರ ಮಾಡುತ್ತಿದೆಯೇ? ಪಶು ಸಂಗೋಪನೆಯಲ್ಲಿ ಕಳೆದ ೨೦ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಈವರೆಗೆ ಆಗಿರುವುದೇ ಬೇರೆ. ಇನ್ನು ಮುಂದೆ ಆಗಲಿರುವುದೇ ಬೇರೆ. ಸರ್ಕಾರದ ಪುಣ್ಯಕೋಟಿ ಯೋಜನೆ, ಒಂದು ಲಕ್ಷ ಜಾನುವಾರುಗಳ ರಕ್ಷಣೆ ವಾಗ್ದಾನ, ಗೋಶಾಲೆ ಸ್ಥಾಪನೆ ಘೋಷಣೆ ಮೆಚ್ಚುವಂಥದ್ದೇ. ಇದರಿಂದ ಜನರಿಗೆ ಕರ್ಣಾನಂದವಾಗಿದೆ. ಅಪ್ಯಾಯಮಾನವಾಗಿದೆ. ಆದರೆ ಇದರ ಕಾರ್ಯಸಾಧ್ಯತೆ ಬಗ್ಗೆ ಅದೇ ಗೋವಿನಲ್ಲಿರುವ ಮುಕ್ಕೋಟಿ ದೇವತೆಗಳಿಗೆ ಗೊತ್ತು. ತಬ್ಬಲಿಯಾಗದಿರಲಿಪುಣ್ಯಕೋಟಿಯ ಮಕ್ಕಳು’ ಎನ್ನುವುದು ಜನಾಶಯ.