ಬೆಳಗಾವಿ: ಹಿಂದೂ ಶಬ್ದದ ಹೇಳಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಮುಖ್ಯಮಂತ್ರಿಗಳು ತನಿಖೆ ನಡೆಸಲಿ. ಹೇಳಿಕೆ ತಪ್ಪು ಅಂತ ಸಾಬೀತಾದರೆ ಕ್ಷಮೆ ಅಷ್ಟೇ ಅಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸವಾಲಿನ ಧಾಟಿಯಲ್ಲಿ ಸ್ಪಷ್ಟನೆ ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಬಹಿರಂಗ ಚರ್ಚೆಗೂ ನಾನು ಸಿದ್ಧ ಎಂದು ಘೋಷಿಸಿದರು.
‘ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಇದು ಕೂಡಾ 1964ರಲ್ಲಿರುವ ಡಿಕ್ಷನರಿಯಲ್ಲಿದೆ. ಬೇಕಿದ್ದರೆ ಅದನ್ನು ತೆಗೆದು ನೋಡಲಿ ಎಂದು ವಾದ ಮಾಡುವವರಿಗೆ ಸಲಹೆ ನೀಡಿದರು. ಮುಖ್ಯವಾಗಿ ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನು ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ್ದೇನೆ. ಆದರೆ, ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ’ ಎಂದರು.