ತನಿಖೆ ನಂತರ ಸತ್ಯ ಬಯಲು

Advertisement

ಶಿವಮೊಗ್ಗ: ಚಂದ್ರಶೇಖರ್ ಆತ್ಮಹತ್ಯೆ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತದೆ. ತನಿಖೆ ಸಂಪೂರ್ಣ ಮುಗಿಯುವವರೆಗೂ ನಿರ್ದಿಷ್ಟವಾಗಿ ಏನನ್ನೂ ಹೇಳು ಆಗುವುದಿಲ್ಲ, ತನಿಖೆಯ ನಂತರ ನಿಜಾಂಶ ಹೊರಬರಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಆತ್ಮಹತ್ಯೆ ಮಾಡಿಕೊಂಡಿರುವ ಚಂದ್ರಶೇಖರ್ ಅವರ ನಿವಾಸಕ್ಕೆ ಗುರುವಾರ ಭೇಟಿ ಕೊಟ್ಟು ಅವರ ಕುಟುಂಬದವರಿಗೆ ಸಾಂತ್ವನ ಹೇಳಿ, ಕೆಲಸ ಮಾಡುವಾಗ ಒತ್ತಡವಿತ್ತಾ ಅಥವಾ ಅದೇ ಕಾರಣಕ್ಕೆ ಆತ್ಮಹತ್ಯೆ ನಡೆದಿದೆಯಾ ಎಂಬುದರ ಬಗ್ಗೆ ತನಿಖೆಯ ವರದಿ ಬರುವ ತನಕ ಮಾತನಾಡಲು ಸಾಧ್ಯವಿಲ್ಲ ಎಂದರು.
೧೮೭ ಕೋಟಿಯ ಅವ್ಯವಹಾರದ ಬಗ್ಗೆ ತನಿಖೆ ನಡೆದಿದೆ. ಡೆತ್‌ನೋಟ್‌ನಲ್ಲಿ ಸಚಿವರ ಮೌಖಿಕ ಆದೇಶ ಎಂದು ಬರೆದಿದ್ದಾರೆ. ಸಚಿವರ ಹೆಸರು ಉಲ್ಲೇಖವಿಲ್ಲದ ಕಾರಣ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ. ಈಶ್ವರಪ್ಪನವರ ಪ್ರಕರಣದಲ್ಲಿ ಅವರ ಹೆಸರಿತ್ತು. ಹಾಗಾಗಿ ಈ ಪ್ರಕರಣವನ್ನು ಈಶ್ವರಪ್ಪನವರ ಪ್ರಕರಣದ ಜೊತೆ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಚನ್ನಗಿರಿ ಪ್ರಕರಣ: ಅವರ ಕಾಲದಲ್ಲಿ ಸೈಬರ್ ಕ್ರೈಂಗೆ ಪೊಲೀಸ್ ಠಾಣೆಯೇ ಇರಲಿಲ್ಲ. ನಮ್ಮ ಸರ್ಕಾರದಲ್ಲಿ ೪೫ ಸೈಬರ್ ಪೊಲೀಸ್ ಠಾಣೆ ಪ್ರಾರಂಭಿಸಿದ್ದೇವೆ. ಎಫ್‌ಐಆರ್ ಸಂಖ್ಯೆ ಜಾಸ್ತಿ ಆಗಿದೆ. ಚನ್ನಗಿರಿ ಪ್ರಕರಣದ ವರದಿ ಇನ್ನೂ ಬಂದಿಲ್ಲ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಈ ಪ್ರಕರಣದಲ್ಲಿ ೨೫ ಜನರ ಬಂಧನ ಆಗಿದೆ. ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದರು.