ನಿಂದಿಸಿದವರ ಲಿಂಗ ಕಳೆಯುತ ಮುಂದೆ ಲಿಂಗವ ಕೊಟ್ಟು ಕ್ಷಮಿಸಿದ ಪರಮಾತ್ಮ ಸಿದ್ಧಾರೂಢರು. ಶಿವರಾತ್ರಿ ಉತ್ಸವದ ಕಾಲದಲ್ಲಿ ಜಗದ್ಗುರು ಶ್ರೀ ಸಿದ್ಧಾರೂಢರ ಶ್ರೀ ಮಠದಲ್ಲಿ ವಿಶೇಷವಾದ ಪೂಜಾ ವೈಭವ ರತ್ನ ಖಚಿತ ಕಿರೀಟ ಮಹಾಪೂಜೆ ನೋಡುವದಕ್ಕೆ ಸಿದ್ಧಾಶ್ರಮದಲ್ಲಿ ಬಹಳಷ್ಟು ಜನ ಸೇರಿದ್ದರು. ಅದು ಸಾಕ್ಷಾತ್ ಶಿವನ ಕೈಲಾಸವೇ ಎನ್ನುವಂತೆ ಭಾಸವಾಗುತ್ತಿತ್ತು. ಮಂಟಪದಲ್ಲಿ ಶಿವನ ಅವತಾರಿ ಸಿದ್ಧಾರೂಢರು ವಿರಾಜಮಾನರಾಗಿ ಸಾಕ್ಷಾತ್ ಶಿವನೇ ಅನ್ನುವಂತೆ ಕಂಗೊಳಿಸುತ್ತಿದ್ದರು. ಭಕ್ತಸ್ತೋಮ ಸಾಕ್ಷಾತ್ ಶಿವನೇ ಎಂದು ಪೂಜಾ ಅಲಂಕಾರ ನೋಡುತ್ತಾ ಗುರುರಾಜ ಸಿದ್ಧಾರೂಢ ಸಮರ್ಥ ಬೆಳಗುವೆ ಆರತಿ ಎಂದು ಹಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮಠದ ಎದುರಿಗೆ ಇರುವ ಕೆರೆಯ ದಿನ್ನಿಯ ಮೇಲೆ ನಾಲ್ಕು ಜನ ಜಂಗಮ ಅಯ್ಯನವರು ಸಿದ್ಧಾರೂಢರನ್ನು ನಿಂದಿಸುತ್ತ ಪರಸ್ಪರ ಹರಟೆ ಹೊಡೆಯುತ್ತಾ ನಡೆದಿದ್ದರು. ಪ್ರತಿಯೊಬ್ಬರ ಎದೆಯ ಮೇಲೆ ಲಿಂಗಗಳು ಶೋಭಿಸುತ್ತಿದ್ದವು ಹಣೆಗೆ ಭಸ್ಮ ಧರಿಸಿದ್ದರು. ಅದರಲ್ಲಿ ಒಬ್ಬನು ಈ ಸಿದ್ಧಾರೂಢನದು ಬಹಳವಾಗಿದೆ, ಇವನು ಅತ್ಯಂತ ಮೂರ್ಖನಾಗಿದ್ದು ಲಿಂಗವಿಲ್ಲದ ಭವಿಯಾಗಿದ್ದಾನೆ, ಮೂರ್ಖ ಜನರು ಕೂಡ ಇಂತಹ ಲಿಂಗವಿಲ್ಲದ ಮೂಢನಿಗೆ ಮಹಾತ್ಮ ಎಂದು ಶಿವನ ಅವತಾರಿ ಎಂದು ಪವಾಡ ಪುರುಷನೆಂದು ತತ್ವಜ್ಞಾನಿ ಎಂದು ಪೂಜಿಸುತ್ತಾರೆ, ಇವರಿಗೆ ವಿವೇಕವೇ ಇಲ್ಲ ಎಂದನು. ಆಗ ಎರಡನೆಯವನು ಇವನು ಪೂಜೆಗೆ ಯೋಗ್ಯನಲ್ಲ, ನಾವು ಶ್ರೇಷ್ಠ ಗುರುಗಳಾಗಿದ್ದು ಜಂಗಮ ಕುಲದಲ್ಲಿ ಹುಟ್ಟಿದ್ದು, ಆದುದರಿಂದ ಜಂಗಮರೇ ಪೂಜೆಗೆ ಯೋಗ್ಯರೆಂದು ಸರ್ವ ಶಾಸ್ತ್ರಗಳು ಸ್ಪಷ್ಟವಾಗಿ ಹೇಳುತ್ತಿವೆ, ಹೀಗಿದ್ದರೂ ಈ ಬುದ್ಧಿಗೇಡಿ ಲಿಂಗಾಯತರೂ ಈ ಹುಚ್ಚ ಸಿದ್ಧನ ಕಾಲಿಗೆ ಬಿದ್ದು ಜಾತಿ ಭ್ರಷ್ಟರಾಗಿದ್ದಾರೆ, ಇದನ್ನು ನೋಡಿ ನನಗೆ ಕಳವಳವಾಗುತ್ತದೆ ಎಂದನು.ಆಗ ಮೂರನೆಯವನು ಹೇಳುತ್ತಾ ಮೊನ್ನೆ ಮೊನ್ನೆ ನಾಲ್ಕು ಜನ ಕುಡುಕರು ಬಂದು ಈ ಸಿದ್ಧನನ್ನು ಚೆನ್ನಾಗಿ ಹೊಡೆದರು ಏನೋ ಮಾತನಾಡದೆ ಸುಮ್ಮನೆ ಕುಳಿತಿದ್ದನು, ಇವತ್ತು ರಥದಲ್ಲಿ ಕುಳಿತು ಡವಲು ತೋರಿಸುತ್ತಾನೆ, ಇವನಿಗೆ ನಾಚಿಕೆ ಇಲ್ಲ ಎಂದನು. ಆಗ ನಾಲ್ಕನೆಯವನು ಈಗ ನಾಲ್ಕು ತಿಂಗಳ ಹಿಂದೆ ಸಂಜೆ ಚಿದ್ಘನಾನಂದರ ಸಮಾಧಿಯ ಮೇಲೆ ಕುಳಿತ ಈ ಸಿದ್ಧನನ್ನು ನಾನು ಎರಡೂ ಕೈಗಳಿಂದ ಎತ್ತಿ ಭೂಮಿಗೆ ಅಪ್ಪಳಿಸಿ ಬಿಟ್ಟೆ, ಸತ್ತ ಕಪ್ಪೆಯಂತೆ ನೆಲಕ್ಕೆ ಬಿದ್ದನು, ಹೀಗೆ ಈ ಲಿಂಗವಿಲ್ಲದ ಭವಿಗೆ ಶಿಕ್ಷೆ ಕೊಟ್ಟೆನು ಎಂದು ಜೋರಾಗಿ ನಕ್ಕು ಹೇಳಿದನು. ಆಮೇಲೆ ಮೊದಲನೆಯ ಐಯ್ಯನು ಹೀಗೆ ಹೇಳಿದನು ನೀನು ನಿಜವಾಗಿ ಕೆಟ್ಟ ಕೆಲಸ ಮಾಡಿದೆ ಆತನಿಗೆ ಈ ಪ್ರಕಾರ ಶಿಕ್ಷೆ ಕೊಡದೆ ಬುದ್ಧಿಮಾತು ಹೇಳಿ ಒಳ್ಳೆಯ ಮಾರ್ಗಕ್ಕೆ ತರಬಹುದಾಗಿತ್ತು, ಈ ನಿನ್ನ ದುಷ್ಟ ಕರ್ಮದ ಫಲವಾಗಿ ನಿನ್ನ ಹೆಂಡತಿ ಮಕ್ಕಳು ಸತ್ತರು, ನೀನು ದಿಕ್ಕಿಲ್ಲದ ಪರದೇಶಿಯಾಗಿ ಪಿಶಾಚಿಯಂತೆ ತಿರುಗುತ್ತಿರುವೆ ಎಂದನು. ಆಗ ಅದಕ್ಕೆ ಅವನು ಸಾಯುವವರು ಸಹಜವಾಗಿ ಸಾಯುತ್ತಾರೆ, ಇದರಲ್ಲಿ ಈ ಹುಚ್ಚ ಸಿದ್ಧನ ಮಹತ್ವವೇನೂ ಇಲ್ಲ, ನಾನು ಅವನಿಗೆ ತಕ್ಕ ಶಿಕ್ಷೆ ಮಾಡಿದೆ, ಇದರಿಂದ ನನ್ನ ಮನಸ್ಸಿಗೆ ಸಮಾಧಾನವಿದೆ ಎಂದನು. ಆಗ ಎರಡನೇ ನಡೀರಿಪಾ ಈ ಹುಚ್ಚ ಸಿದ್ಧನ ತೆಲಿಗೆ ಕಿರೀಟ ಹಾಕಿ ಪೂಜೆ ಮಾಡ್ತಾರಂತೆ, ನೋಡೋನು ನಡೀರಿ ಎಂದ ನಾಲ್ವರು ಮಠದ ಕಡೆಗೆ ನಡೆದರು. ಅಷ್ಟರಲ್ಲಿ ದಾರಿಯ ಮಧ್ಯ ಹಿರೇಮಠದ ಪಟ್ಟದಪ್ಪನವರು ಮತ್ತು ಅವರ ಜೊತೆಗೆ ಕೆಲವು ಜನ ಅಯ್ಯನವರು ಭೇಟಿಯಾದರು, ನೀವು ಎಲ್ಲಿಗೆ ಹೊರಟಿದ್ದೀರಿ ಎಂದು ಹಿರೇಮಠದ ಪಟ್ಟದಪ್ಪನವರನ್ನು ಈ ನಾಲ್ವರು ಕೇಳಿದರು, ಶಿವನ ಅವತಾರಿಯಾದ ಸಿದ್ಧಾರೂಢರ ಮಹಾಪೂಜೆ ರಥೋತ್ಸವ ನೋಡಿ ಅವರ ತತ್ವೋಪದೇಶ ಕೇಳಿ ಅವರ ದರ್ಶನ ಆಶೀರ್ವಾದದಿಂದ ಈ ಜನ್ಮ ಸಾರ್ಥಕ ಮಾಡಿಕೊಳ್ಳಲು ಸಿದ್ಧಾರೂಡರ ಕಡೆಗೆ ನಡೆದಿದ್ದೇವೆ ಎಂದರು, ಅದಕ್ಕೆ ಆ ನಾಲ್ವರು ಅಯ್ಯನವರು ಆ ಲಿಂಗವಿಲ್ಲದ ಭವಿಯ ದರ್ಶನದಿಂದ ಮಹಾಪಾಪ ಉಂಟಾಗುತ್ತದೆ, ನೀವು ಜಂಗಮ ಜಾತಿಯಿಂದ ಭ್ರಷ್ಟರಾಗುತ್ತೀರಿ ಎಂದರು. ಅಷ್ಟರಲ್ಲಿ ಹಿರೇಮಠದ ಪಟ್ಟದಪ್ಪನವರು ಮೊದಲನೆಯ ಅಯ್ಯನನ್ನು ನೋಡಿ ಯಾಕೋ ರುದ್ರಯ್ಯ ನಿನ್ನ ಇಷ್ಟ ಲಿಂಗವೆಲ್ಲಿದೆ ಎಂದರು, ಅದಕ್ಕೆ ಅವನು ಇಲ್ಲಿಯೇ ಇದೆಯಲ್ಲ ಎಂದು ತನ್ನ ಎದೆ ಮುಟ್ಟಿ ನೋಡಿದಾಗ ಅಲ್ಲಿ ಲಿಂಗವಿರಲಿಲ್ಲ, ಅವನ ಸಂಗಡವಿದ್ದ ಅಯ್ಯನವರು ತಮ್ಮ ಲಿಂಗಗಳನ್ನು ನೋಡಿಕೊಂಡಾಗ ಅವರ ಎದೆಯ ಮೇಲಿನ ಲಿಂಗಗಳೆಲ್ಲ ಮಾಯವಾಗಿದ್ದವು ಎಲ್ಲರಿಗೂ ಆಶ್ಚರ್ಯವಾಗಿ ತಾವು ಬಂದ ದಾರಿಯಲ್ಲಿ ಲಿಂಗವನ್ನು ಹುಡುಕುತ್ತಾ ನಡೆದರು ಎಲ್ಲಿಯೂ ಕಾಣಿಸದೆ ಮನನೊಂದು ಮರಳಿ ಬಂದರು.
ಆಗ ಹಿರೇಮಠದ ಪಟ್ಟದಪ್ಪನವರು ನೀವು ಇಷ್ಟ ಲಿಂಗಗಳನ್ನು ಕಳೆದುಕೊಂಡಿದ್ದೀರಿ, ನೀವು ಈಗ ಪ್ರಾಣವನ್ನೇ ತ್ಯಾಗ ಮಾಡಬೇಕಾದ ಪ್ರಸಂಗ ಎಂದರು. ಆಗ ರುದ್ರಯ್ಯ ಹೇಳಿದ ಇದೇ ಈಗ ಲಿಂಗಗಳು ನಮ್ಮ ಎದೆಯ ಮೇಲೆ ಇದ್ದವು, ಇಷ್ಟರಲ್ಲಿ ಏನಾದವು ಎಂಬುದು ನಮಗೆ ತಿಳಿಯದಾಗಿದೆ ಎಂದರು, ಆಗ ಹಿರೇಮಠದ ಪಟ್ಟದಪ್ಪನವರು ನಿಮಗೆ ಹೀಗೆ ಆಗಬೇಕಾದರೆ ಶಿವ ನಿಂದೆ ಮಾಡಿರಬಹುದು ಇಲ್ಲವೇ ಮಹಾತ್ಮರ ನಿಂದೆ ನೀವು ಮಾಡಿರಬಹುದು ಇದರಿಂದ ನಿಮಗೆ ಈ ಪರಿಸ್ಥಿತಿ ಬಂದಿರುತ್ತದೆ ಎಂದರು. ಅದಕ್ಕೆ ಸಿದ್ದಾರೂಢರ ನಿಂದನೆ ಮಾಡಿರುತ್ತೇವೆ ಎಂದು ಒಪ್ಪಿಕೊಂಡರು. ಇದಕ್ಕೆ ನೀವೇ ಉಪಾಯ ತೋರಿಸಬೇಕೆಂದು ಅಂಗಲಾಚಿ ಬೇಡಿಕೊಂಡರು, ಆಗ ಅವರು ಸಿದ್ಧಾರೂಢ ಭಗವಂತನು ಭಕ್ತರ ಭಾಗ್ಯದ ಭಗವಂತ ಭಕ್ತರ ಕಾಮಧೇನು ಕಲ್ಪವೃಕ್ಷನಾಗಿದ್ದಾನೆ, ಬೇಡಿದವರಿಗೆ ಬೇಡಿದ್ದನ್ನು ಕೊಡುವ ಭಗವಂತನು ಸಿದ್ಧನಾಗಿರುತ್ತಾನೆ, ನೀವು ನಾಲ್ವರು ನನ್ನ ಜೊತೆಗೆ ಬಂದು ದಯಾಘನನಾದ ಸಿದ್ಧಾರೂಢರ ಹತ್ತಿರ ಕ್ಷಮೆ ಕೇಳಿದರೆ ನಿಮ್ಮ ಲಿಂಗಗಳು ಮರಳಿ ಬರುತ್ತವೆ ಎಂದರು. ಅದಕ್ಕೆ ನಾಲ್ವರು ಸಿದ್ಧಾರೂಢರ ಹತ್ತಿರ ಬಂದು ಸಿದ್ಧಾರೂಢರ ಪೂಜೆಯನ್ನು ನೋಡಿ ಸಾಕ್ಷಾತ್ ಪರಶಿವನೇ ಇವನು ಎಂದು ಕೊಂಡಾಡಿ ನಾವು ಬಹಳ ದೊಡ್ಡ ಅಪರಾಧ ಮಾಡಿದ್ದೇವೆ ಎಂದು ಸಿದ್ಧಾರೂಢರ ಹತ್ತಿರ ಕ್ಷಮೆ ಯಾಚಿಸಿ ನಡೆದ ವೃತ್ತಾಂತವನ್ನೆಲ್ಲ ತಿಳಿಸಿ ನಮಗೆ ನಮ್ಮ ಲಿಂಗಗಳನ್ನು ಕರುಣಿಸಬೇಕೆಂದು ಅಂಗಲಾಚಿ ಬೇಡಿಕೊಂಡರು ಆವಾಗ ಸಿದ್ಧಾರೂಢರು ತಮ್ಮ ಸಿಂಹಾಸನದ ಹಿಂದೆ ಕೈಹಾಕಿ ತೆಗೆದುಕೊಳ್ಳಿ ನಿಮ್ಮ ಲಿಂಗಗಳು ನಮ್ಮ ಮಠಕ್ಕೆ ಬರುವ ಒಬ್ಬ ಭಕ್ತನಿಗೆ ಸಿಕ್ಕಿರುತ್ತವೆ ಅವನು ನಮಗೆ ತಂದು ಕೊಟ್ಟಿರುತ್ತಾನೆ. ಸರಿಯಾಗಿ ಪರೀಕ್ಷೆ ಮಾಡಿಕೊಂಡು ನಿಮ್ಮ ನಿಮ್ಮ ಲಿಂಗಗಳನ್ನು ನೀವು ತೆಗೆದುಕೊಳ್ಳುವಂತವರಾಗಿರಿ ಎಂದು ಹೇಳಿದರು. ನಂತರ ಅವರಿಗೆ ಲಿಂಗವೆಂದರೆ ಏನು ಎಂಬುದನ್ನು ತಿಳಿಸಿದರು.