ತಟಸ್ಥ ಉಳಿದರೆ ನೋಟಾ….

Advertisement

ನಮಗಂತೂ ಸಾಕಾಗಿ ಹೋಗಿದೆ. ಎಷ್ಟ ಜನರ ಮನವಿಯನ್ನು ಸ್ವೀಕರಿಸಬೇಕು ನಾವು? ನಮಗೇನೂ ಬೇರೆ ಕೆಲಸವೇ ಇಲ್ಲವೇ? ಅಥವಾ ಇವರದೊಬ್ಬರದೇ ಸಮಸ್ಯೆ ನೋಡಿಕೊಂಡು ಇರಬೇಕಾ? ಎಂದು ಬಹುತೇಕ ದೇವರು ಪೇಚಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಮುಗಿದಿದ್ದೇ ಬಂತು. ಕ್ಯಾಂಡಿಡೇಟುಗಳು, ಅವರ ಕುಟುಂಬದವರು, ಅವರ ಹಿಂಬಾಲಕರು, ಅವರ ಮುಂಬಾಲಕರು ದೇವರೇ ಕಾಪಾಡಪ್ಪಾ… ಗೆದ್ದರೆ ಅದು ಮಾಡಿಸುತ್ತೇನೆ, ಇದು ಮಾಡಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಅವರಿವರಿಂದ ಇನ್ಫುಲಿಯನ್ಸ್ ಕೂಡ ಮಾಡುತ್ತಿದ್ದಾರೆ. ಅವರು ಹೋದ ಮರುಕ್ಷಣವೇ ಅವರ ಎದುರಾಳಿ ಕ್ಯಾಂಡಿಡೇಟ್ ಬಂದು ಸ್ವಾಮೀ ನೀನೆ ನನ್ನ ಕಾಪಾಡಬೇಕು. ಅವನು ನಿನಗೆ ಏನೇನು ಕೊಡುತ್ತೇನೆ ಎಂದಿದ್ದಾನೋ…. ನನ್ನ ಗೆಲ್ಲಿಸಿದರೆ ನಾನು ಅದರ ಡಬಲ್ ಕೊಡುವೆ ಎಂದು ಹೇಳುತ್ತಿದ್ದಾನೆ. ನಾವು ಯಾರನ್ನ ಅಂತ ಗೆಲ್ಲಿಸೋದು. ಇವನನ್ನು ಗೆಲ್ಲಿಸಿದರೆ ಅವನಿಗೆ ಸಿಟ್ಟು, ಅವನನ್ನು ಗೆಲ್ಲಿಸಿದರೆ ಇವನಿಗೆ ಸಿಟ್ಟು. ತಟಸ್ಥ ಉಳಿದರೆ ನೋಟಾ ಎಂದು ನಮ್ಮ ಮೇಲೆ ಅಪವಾದ ಕೊಡುತ್ತಾರೆ. ಏನು ಮಾಡಬೇಕು ಎಂದು ತಿಳಿಯದಾಗಿದೆ. ಅದೊಂದು ಆದರೆ ಇನ್ನೊಂದು ಕಡೆ… ನಾನು ಡ್ರೈವ್ ಹೋಗುತ್ತೇನೆ ಪೆನ್ನು ಮಾಯಮಾಡಿಬಿಡು ಎಂದು ಬೇಡಿಕೊಳ್ಳುತ್ತಿದ್ದಾರೆ. ನಮಗಂತೂ ಬೇರೆ ಕಡೆ ಹೋಗಿ ಸೆಟ್ಲಾಗಲೇ ಎಂದು ವಿಚಾರ ಮಾಡುತ್ತಿದ್ದೇವೆ ಅನ್ನುವಷ್ಟರ ಮಟ್ಟಿಗೆ ಬೇಜಾರು ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೋದಸಲ ಆ ಕ್ಯಾಂಡಿಡೇಟು ಮೊದಲೇ ಉರುಳುಸೇವೆ ಮಾಡಿದ್ದ. ಅಯ್ಯೊ ಇಷ್ಟು ಮಾಡಿದ್ದಾನಲ್ಲ ಅಂತ ಅವನನ್ನು ಗೆಲ್ಲುವ ಹಾಗೆ ಮಾಡಿದರೆ ಗುಡಿಗೆ ಸುಣ್ಣ ಹಚ್ಚಿಸಲಿಲ್ಲ…‌ ಬಣ್ಣ ಬಳಿಸಲಿಲ್ಲ. ವೇಷ ಮರೆಸಿಕೊಂಡು ಹೋಗಿ ಸಾಹೇಬರೇ ಗುಡಿಗೆ ಸುಣ್ಣ ಹಚ್ಚಿಸುತ್ತೇನೆ ಎಂದು ಬೇಡಿಕೊಂಡಿದ್ದಿರಿ ಅಂತ ಕೇಳಿದರೆ ಅಯ್ಯೋ…ಹರಕೆ ಹನ್ನೆರಡು ವರ್ಷ ಅಂದ. ಅದೇ ಸಿಟ್ಟಿನ ಮೇಲೆ ಕಳೆದ ಬಾರಿ ಆತನನ್ನು ಮನೆಯಲ್ಲಿ ಕೂಡಿಸಿದ್ದೇವೆ. ನಾವೂ ಸಹ ನೋಡುತ್ತೇವೆ. ನಮ್ಮಲ್ಲೇ ಒಂದು ಸಮಿತಿ ಮಾಡಿಕೊಂಡು ಯಾರನ್ನ ಗೆಲ್ಲಿಸಬೇಕು..ಯಾರನ್ನ ಕುರ್ಚಿಯ ಮೇಲೆ ಕೂಡಿಸಬೇಕು ಯಾರನ್ನ ಮನೆಗೆ ಕಳುಹಿಸಬೇಕು ಎಂದು ಒಂದು ಪಟ್ಟಿ ಮಾಡುತ್ತೇವೆ. ಮುಂದಿನ ಸಲದಿಂದ ನಮ್ಮಲ್ಲೇ ಒಂದು ಸುತ್ತೋಲೆ ಹೊರಡಿಸಿ ಅದರ ಹಾಗೆ ಮಾಡುತ್ತೇವೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಕಂಠಿದುರುಗಮ್ಮನ ಅಂಗಳದಲ್ಲಿ ಸೇರಿದ್ದ ಸಭೆಯಲ್ಲಿ ದೇವರುಗಳು ನಿರ್ಧರಿಸಿದ್ದಾರೆ ಎಂದು ಲೊಂಡೆನುಮ ತನ್ನ ಮುಖವಾಣಿ ಪತ್ರಿಕೆಯಲ್ಲಿ ವರದಿಮಾಡಿದ್ದಾನೆ.