ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಸಿಂಚನವಾಗಿದೆ. ಕಳೆದ ಕೆಲ ದಿನಗಳಿಂದ ಕವಿದುಕೊಂಡಿದ್ದ ಮೋಡ ಶನಿವಾರ ಮುಂಜಾನೆಯಿಂದಲೇ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದೆ.
ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿದಿದ್ದ ವರುಣ ಕರಾವಳಿಯಲ್ಲಿ ಮೋಡದ ವಾತಾವರಣ ಮಾತ್ರ ಕಂಡುಬಂದಿತ್ತು. ಆದರೆ ಶನಿವಾರ ಬೆಳಿಗ್ಗೆಯಿಂದಲೇ ಕರಾವಳಿ ತಾಲ್ಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ ಭಾಗಗಳಲ್ಲಿ ಭಾರೀ ಗಾಳಿ ಹಾಗೂ ಗುಡುಗು ಸಹಿತ ಮಳೆಯಾಗಲಾರಂಭಿಸಿದೆ.
ಉಳಿದಂತೆ ಘಟ್ಟದ ಮೇಲಿನ ತಾಲ್ಲೂಕುಗಳಾದ ಹಳಿಯಾಳ, ಮುಂಡಗೋಡ, ಶಿರಸಿ, ಸಿದ್ದಾಪುರ, ಜೋಯಿಡಾ ಭಾಗದಲ್ಲೂ ಗುಡುಗು ಸಹಿತ ಮಳೆಯಾಗುತ್ತಿದೆ. ಬಿಸಿಲಿನ ಬೇಗೆಯಲ್ಲಿದ್ದ ಇಳೆಗೆ ಮಳೆಯ ಸಿಂಚನವಾಗಿರುವುದು ತಂಪಾದ ವಾತಾವರಣ ಸೃಷ್ಟಿಯಾಗಿದೆ. ಇನ್ನು ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮದುವೆ ಇತರೆ ಸಮಾರಂಭಗಳಿಗೆ ಮಳೆ ಅಡ್ಡಿಯಾಗಿ ತೊಂದರೆ ಪಡುವಂತಾಗಿದೆ.
ಇನ್ನು ಎಪ್ರಿಲ್ 22ರ ವರೆಗೆ ಜಿಲ್ಲೆಯಾದ್ಯಂತ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.