ಉಮೇಶ ಕತ್ತಿಯವರ ಅಂತ್ಯಕ್ರಿಯೆಯನ್ನು ಬೆಲ್ಲದ ಬಾಗೇವಾಡಿಯ ಜಮೀನಿನಲ್ಲಿ ತಂದೆ ವಿಶ್ವನಾಥ್ ಕತ್ತಿ ಮತ್ತು ತಾಯಿ ರಾಜೇಶ್ವರಿ ಅವರ ಸಮಾಧಿ ಪಕ್ಕದಲ್ಲಿ ನಿಗದಿ ಪಡಿಸಿದ ಸ್ಥಳದಲ್ಲಿ 50ಕ್ಕೂ ಹೆಚ್ಚು ಮಠಾಧೀಶರ ಸಮ್ಮುಖದಲ್ಲಿ ಲಿಂಗಾಯತ ವೀರಶೈವ ಧರ್ಮದ ವಿಧಿವಿಧಾನಗಳನ್ನು ಕುಟುಂಬಸ್ಥರು ಪೂರೈಸಿದರು. ಬಳಿಕ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಉಮೇಶ ಕತ್ತಿಯವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ವೇಳೆ ಉಮೇಶ ಕತ್ತಿ ಪತ್ನಿ, ಮಕ್ಕಳು, ಸಹೋದರ ರಮೇಶ ಕತ್ತಿ ಮತ್ತು ಅವರ ಕುಟುಂಬ ಸೇರಿ ಇನ್ನಿತರ ಕುಟುಂಬಸ್ಥರು, ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಂತವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಇದೇ ವೇಳೆ ಉಮೇಶ ಕತ್ತಿಯವ ಪತ್ನಿ ಶೀಲಾ ಅವರಿಗೆ ರಾಷ್ಟ್ರಧ್ವಜವನ್ನು ಸಿಎಂ ಬೊಮ್ಮಾಯಿ ಹಸ್ತಾಂತರಿಸಿದರು.
ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಆರಗ ಜ್ಞಾನೇಂದ್ರ, ಸಿ.ಸಿ. ಪಾಟೀಲ್, ಕೋಟಾ ಶ್ರೀನಿವಾಸ್ ಪೂಜಾರಿ, ಹಾಲಪ್ಪ ಆಚಾರ್, ಬಹುತೇಕ ಎಲ್ಲ ಸಚಿವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಮಂಗಲ ಅಂಗಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಎ.ಬಿ. ಪಾಟೀಲ್, ಸತೀಶ ಜಾರಕಿಹೊಳಿ, ಎಚ್.ಡಿ. ರೇವಣ್ಣ, ಶಾಸಕರಾದ ಅಮರೇಗೌಡ ಬಯ್ಯಾಪುರೆ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಅಭಯ್ ಪಾಟೀಲ್, ಮಹಾಂತೇಶ ಕೌಜಲಗಿ, ಪಿ.ರಾಜೀವ್, ಅಂಜಲಿ ನಿಂಬಾಳ್ಕರ್, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಇನ್ನಿತರ ಶಾಸಕರು, ಮಾಜಿ ಶಾಸಕರು ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸಾವಿರಾರು ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ವೇಳೆ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.