ಬೆಳಗಾವಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸದ್ದು ಮಾಡುತ್ತಿರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಡೀಪ್ ಫೇಕ್ ಫೋಟೋ ಎಡಿಟ್ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಖಾನಾಪುರದ ಯುವಕನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಆರೋಪಿ ಬೆಂಗಳೂರಿನಲ್ಲಿ ಐಟಿ ಉದ್ಯೋಗ ಮಾಡಿಕೊಂಡಿದ್ದಾನೆ. ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಹಾಗೂ ಆಕೆಯ ಇಬ್ಬರು ಸ್ನೇಹಿತೆಯರ ನಗ್ನ ಫೋಟೋ ಎಡಿಟ್ ಮಾಡಿ ಖಾನಾಪುರದ ಯುವಕ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ. ಯುವತಿ ಕೊಟ್ಟ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿ ಹೆಸರಿನಿಂದ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು, ಡೀಪ್ ಫೇಕ್ ಫೋಟೊ ಎಡಿಟ್ ಮಾಡಿ ಪ್ರೀತಿಸುತ್ತಿದ್ದ ಹಾಗೂ ಮತ್ತಿಬ್ಬರು ಹುಡುಗಿಯರ ನಗ್ನ ಫೋಟೋವನ್ನು ಅಪ್‌ಲೋಡ್ ಮಾಡಿದ್ದ ಎಂದು ಹೇಳಲಾಗಿದೆ.
ಸಂತ್ರಸ್ತ ಯುವತಿಯ ಸಾಮಾಜಿಕ ಜಾಲತಾಣ ಖಾತೆಯಿಂದ ರಶ್ಮಿಕಾ ಮಂದಣ್ಣ ಅವರ ಡೀಫ್ ಫೇಕ್ ವಿಡಿಯೋ ಮಾಡಿದ್ದ ಸಾಫ್ಟವೇರ್ ಬಳಸಿಯೂ ಈ ರೀತಿ ನಗ್ನ ಫೋಟೋ ಎಡಿಟ್ ಮಾಡಿರಬಹುದು. ಇಲ್ಲವೇ ನಾರ್ಮಲ್ ಎಡಿಟಿಂಗ್‌ನಲ್ಲೂ ಮಾಡಿರಬಹುದು ಎಂದು ಹೇಳಲಾಗಿದೆ.
ಈ ರೀತಿ ಯಾರಿಗಾದರೂ ಅನ್ಯಾಯ ಆಗಿದ್ದರೆ ಹಿಂಜರಿಯದೇ ನಮ್ಮ ಪೊಲೀಸರ ಬಳಿ ಬಂದು ದೂರು ಕೊಡಿ. ನಾವು ಅರೋಪಿಗಳ ವಿರುದ್ಧ ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಡಾ. ಭೀಮಾಶಂಕರ ಗುಳೇದ ಭರವಸೆ ನೀಡಿದ್ದಾರೆ.