ಡಿಆರ್‌ಡಿಒ ಲಘುವ್ಯಾಪ್ತಿ ಕ್ಷಿಪಣಿ ಪರೀಕ್ಷೆ ಯಶಸ್ವಿ

ಕ್ಷಿಪಣಿ
Advertisement

ಬಾಲ್‌ಸೋರ್: ಭೂಮಿಯಿಂದ ಆಕಾಶಕ್ಕೆ ನೆಗೆಯಬಲ್ಲ ಲಘು ವ್ಯಾಪ್ತಿಯ ಕ್ಷಿಪಣಿ (ವಿಎಲ್-ಎಸ್‌ಆರ್‌ಎಸ್‌ಎಎಂ)ಯ ಪರೀಕ್ಷೆ ಮಂಗಳವಾರ ಯಶಸ್ವಿಯಾಗಿ ನೆರವೇರಿದೆ. ಒಡಿಶಾ ಕರಾವಳಿಯಾಚೆ ಇರುವ ಚಾಂದಿಪುರದ ಸಮಗ್ರ ಪರೀಕ್ಷಾ ವಲಯದಿಂದ ಈ ಕ್ಷಿಪಣಿಯನ್ನು ಹಾರಿಬಿಡಲಾಗಿದೆ. ನೌಕಾಪಡೆಯ ಯುದ್ಧನೌಕೆಯಿಂದ ಕ್ಷಿಪಣಿಯನ್ನು ಉಡಾಯಿಸಲಾಗಿದ್ದು ಅತಿವೇಗದಲ್ಲಿ ಆಕಾಶದಲ್ಲಿರುವ ಮಾನವರಹಿತ ವಾಹನವನ್ನು ಹೊಡೆದುರುಳಿಸಿದೆ. ದೇಶೀಯ ತರಂಗಾಂತರ ಫ್ರಿಕ್ವೆನ್ಸಿ ಹೊಂದಿರುವ ಈ ಕ್ಷಿಪಣಿ ಅತ್ಯುನ್ನತ ನಿಖರತೆಯೊಂದಿಗೆ ನಿಗದಿತ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ಹೈದರಾಬಾದ್ ಹಾಗೂ ಪುಣೆಯಲ್ಲಿರುವ ಹಿರಿಯ ವಿಜ್ಞಾನಿಗಳು ಈ ಪರೀಕ್ಷೆಯನ್ನು ಈಗ ವೀಕ್ಷಿಸಿ ಸಂತಸಪಟ್ಟರು.
ಕ್ಷಿಪಣಿ ಪರೀಕ್ಷಾ ಅವಧಿಯಲ್ಲಿ ಹಾರಾಟದ ಅಂಕಿಅಂಶಗಳನ್ನು ಬಳಸಿಕೊಂಡು ಹಾರಾಟದ ಮಾರ್ಗ ಹಾಗೂ ನಿರ್ವಹಣೆ ಮಾನದಂಡಗಳನ್ನು ಚಾಂದಿಪುರದಲ್ಲಿರುವ ರಾಡಾರ್, ಇಲೆಕ್ಟ್ರೋ ಆಫ್ಟಿಕಲ್ ಟ್ರ‍್ಯಾಕಿಂಗ್ ಸಿಸ್ಟಮ್ ಹಾಗೂ ಟೆಲಿಮೆಟ್ರಿ ಸಿಸ್ಟಮ್‌ನಂತಹ ಸಾಧನಗಳ ಮೂಲಕೆ ನಿಗಾವಿರಿಸಲಾಗಿತ್ತು. ಭಾರತೀಯ ನೌಕಾಪಡೆಗೆ ಬಹುರೀತಿಯಿಂದ ಉಪಯುಕ್ತವಾಗಬಲ್ಲ ಈ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ನೌಕಾಪಡೆ, ಡಿಆರ್‌ಡಿಒ ಹಾಗೂ ತತ್ಸಂಬಂಧಿ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕ್ಷಿಪಣಿ