ಉಡುಪಿ: ಡಬಲ್ ಇಂಜಿನ್ ಸರ್ಕಾರದಿಂದಷ್ಟೇ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹೇಳಿದರು. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಲಿಗ್ರಾಮದಲ್ಲಿ ಭಾನುವಾರ ನಡೆದ ರೋಡ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಮ್ಮದು ಹೆಸರಿಗೆ ಮಾತ್ರ ಡಬಲ್ ಇಂಜಿನ್ ಸರ್ಕಾರ ಅಲ್ಲ. ಕೊರೊನಾ ಸಂದರ‍್ಭದಲ್ಲಿ ವ್ಯಾಕ್ಸಿನ್, ಸ್ಟೀಲ್, ಮೊಬೈಲ್ ಉತ್ಪಾದಕ ಘಟಕ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹೀಗೆ ಹಲವಾರು ಯೋಜನೆಗಳನ್ನು ಡಬಲ್ ಇಂಜಿನ್ ಸರ್ಕಾರ ನೀಡಿದೆ. ಕರ್ನಾಟಕಕ್ಕೆ ಈ ವರ್ಷವೇ ರಾಷ್ಟ್ರೀಯ ಹೆದ್ದಾರಿಗೆ ಒಂದು ಲಕ್ಷ ಕೋಟಿ ಅನುದಾನ ನೀಡಲಾಗಿದೆ. ತುಮಕೂರಿನಲ್ಲಿ ಹೆಲಿಕಾಪ್ಟರ್ ತಯಾರಿ ಘಟಕ, ರೈಲ್ವೆ ಭೋಗಿಗಳ ನಿರ್ಮಾಣ ಘಟಕ ಸ್ಥಾಪನೆಯಾಗಲಿದ್ದು, ಮುಂದಿನ ದಿನಗಳಲ್ಲಿ ಅದು ದಕ್ಷಿಣದ ಅತಿ ದೊಡ್ಡ ಉದ್ಯಮ ಕೇಂದ್ರವಾಗಲಿದೆ. ಹಲವಾರು ಮಂದಿಗೆ ಉದ್ಯೋಗ ಲಭಿಸಲಿದೆ’ ಎಂದರು.
ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ರೈತರು ಮತ್ತು ಅವರ ಮಕ್ಕಳಿಗೆ ಉತ್ತಮ ಆರ್ಥಿಕ ಮತ್ತು ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಯೋಜನೆಗಳನ್ನು ನೀಡಿದೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ರೈತರ ಸಂಖ್ಯೆ ಕೇಳಿದಾಗ ಅವರು ನೀಡಿದ್ದು ಕೇವಲ ೧೭ ಮಂದಿ. ಆದರೆ, ಯಡಿಯೂರಪ್ಪ ಅವಧಿಯಲ್ಲಿ ೫೪ ಲಕ್ಷ ಕುಟುಂಬಗಳಿಗೆ ಕೃಷಿ ಸಮ್ಮಾನ್ ಯೋಜನೆ ನೀಡಲಾಗಿದೆ. ೫೪ ಲಕ್ಷ ಮನೆಗಳನ್ನು ನೀಡಲಾಗಿದೆ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಇರುವಾಗ ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಯೋಜನೆ, ಕಿಸಾನ್ ಯೋಜನೆಯನ್ನು ಕೇಂದ್ರದಿಂದ ಕರ್ನಾಟಕದ ಜನತೆಗೆ ನೀಡಲು ವಿಫಲವಾಗಿತ್ತು. ಯಡಿಯೂರಪ್ಪ ಮತ್ತು ಬೊಮ್ಮಾಯಿ ಈ ಎಲ್ಲಾ ಯೋಜನೆಯನ್ನು ಸಮರ್ಪಕವಾಗಿ ರಾಜ್ಯದ ಜನತೆಗೆ ತಲುಪಿಸಲು ಯಶಸ್ವಿಯಾಗಿದ್ದಾರೆ ಎಂದರು.
ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡುವ ಮೂಲಕ ನಮ್ಮ ಡಬಲ್ ಇಂಜಿನ್ ಸರ್ಕಾರದ ಶಕ್ತಿಯನ್ನು ಈಗಾಗಲೇ ಕರ್ನಾಟಕಕ್ಕೆ ತೋರಿಸಿದ್ದೇವೆ.
ಸಿದ್ದರಾಮಯ್ಯ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅದನ್ನು ಕೇಳಿದಾಗ ನಗು ಬರುತ್ತಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ, ಭೂ ಕಬಳಿಕೆ, ಮನಿ ಲಾಂಡ್ರಿಂಗ್ ಪ್ರಕರಣ ಇತ್ಯಾದಿಗಳಿಂದಾಗಿ ಈಗ ಬೇಲ್‌ನಲ್ಲಿ ಹೊರಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೊದಲಾದ ಕಾಂಗ್ರೆಸ್ ನಾಯಕರ ಕಥೆಯೂ ಇದೇ ಆಗಿದೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪಕ್ಷ ಪ್ರಮುಖರಾದ ಉದಯ ಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ಸುಲತಾ ಹೆಗ್ಡೆ, ರಾಜು ಪೂಜಾರಿ, ಜಯೇಂದ್ರ ಪೂಜಾರಿ, ಸುರೇಶ್ ಕುಂದರ್, ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ, ಸತೀಶ್ ಬಾರಿಕೆರೆ ಮೊದಲಾದವರಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ನಿರೂಪಿಸಿದರು.
ಅದಕ್ಕೂ ಮುನ್ನ ಸಾಲಿಗ್ರಾಮ ಆಂಜನೇಯ ದೇವಳದ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಶೋ ನಡೆಸಲಾಗಿದ್ದು, ಸಾವಿರಾರು ಸಂಖ್ಯೆಯ ಕಾರ‍್ಯಕರ್ತರು ಭಾಗವಹಿಸಿದ್ದರು. ರೋಡ್ ಶೋ ಉದ್ದಕ್ಕೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಪರ ಘೋಷಣೆ ಮೊಳಗಿತ್ತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯಕರ್ತರ ನಡುವೆ ರೋಡ್ ಶೋದಲ್ಲಿ ಭಾಗಿಯಾಗಿ ಗಮನ ಸೆಳೆದರು.