ಮೈಸೂರು: ಡಬಲ್ ಎಂಜಿನ್ ಸರ್ಕಾರ ಎಂದು ಎದೆ ಬಡಿದುಕೊಂಡರೆ ಸಾಲದು. ಆ ಅವಕಾಶವನ್ನು ಬಳಸಿಕೊಂಡು ಎರಡು ರಾಜ್ಯಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರದ ನೆರವನ್ನು ಪಡೆಯಬೇಕು ‘ಗಡಿ ವಿಚಾರದಲ್ಲಿ ಮಹಾರಾಷ್ಟ್ರದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬುದ್ಧಿ ಹೇಳಿಸುವ ಧೈರ್ಯವೂ ಕರ್ನಾಟಕ ಬಿಜೆಪಿಗೆ ಇಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಗಡಿ ವಿವಾದದ ಬಗ್ಗೆ ಒಳ್ಳೆಯ ವಕೀಲರನ್ನಿಟ್ಟು ವಾದ ಮಾಡಿಸಬೇಕು. ಮುಖ್ಯಮಂತ್ರಿಯು, ಪ್ರಧಾನಿ ಬಳಿಗೆ ಹೋಗಿ ನೈಜ ಸ್ಥಿತಿ ವಿವರಿಸಿ ಗಡಿಯಲ್ಲಿನ ಪರಿಸ್ಥಿತಿ ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದರು. ‘ಮಹಾಜನ ವರದಿಯೇ ಅಂತಿಮ. ಬೆಳಗಾವಿ ನಮ್ಮದು. ಅಲ್ಲಿನ ಒಂದಿಂಚನ್ನೂ ಯಾರಿಗೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ’ ‘ಕರ್ನಾಟಕ ಬಿಜೆಪಿಯವರು ಹೇಡಿಗಳು. ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ಗಡಿಯಲ್ಲಿ ಯಾಕೆ ಗಲಾಟೆ ನಡೆಯುತ್ತಿದೆ? ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವಂತೆ ಮಾಡುತ್ತಿದ್ದಾರೇಕೆ’ ಎಂದು ಪ್ರಶ್ನಿಸಿದರು.