ಟಿಕೆಟ್ ನೀಡಿದ್ದಕ್ಕೆ ದ್ವೇಷದ ರಾಜಕಾರಣ ಮಾಡ್ತಾರೆ

ರಾಮುಲು
Advertisement

ಬಳ್ಳಾರಿ: ಬಿಜೆಪಿ ವರಿಷ್ಠರು ನನಗೆ ಟಿಕೆಟ್ ಕೊಟ್ಟಿದ್ದನ್ನು ಸಹಿಸದ ಕೆಲವರು ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಲೋಕಸಭಾ ಚುನಾವಣೆಯ ಬಿಜೆಪಿ ಘೋಷಿತ ಅಭ್ಯರ್ಥಿ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಿಧಾನಸಭಾ ಚುನಾವಣೆ ಸೋಲಿನ ಬಳಿಕ ವನವಾಸ, ಅಜ್ಞಾತವಾಸದಲ್ಲಿ ಇದ್ದೆ. ಇದೀಗ ಮತ್ತೆ ಪಕ್ಷದ ವರಿಷ್ಠರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ಇದನ್ನು ಹಲವರು ಸಹಿಸುತ್ತಿಲ್ಲ ಎಂದು ಜನಾರ್ಧನ ರೆಡ್ಡಿ ಹೆಸರು ಹೇಳದೆ ಟೀಕಿಸಿದರು.
ನಾನು ೪೦ ವರ್ಷದ ರಾಜಕಾರಣದಲ್ಲಿ ಇದ್ದೇನೆ. ನಾನು ಅಜಾತ ಶತ್ರು ತರಹದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನ್ನನ್ನು ಹಲವರು ಬೆಳೆಸಿದ್ದಾರೆ. ಎಲ್ಲರೊಂದಿಗೂ ಚೆನ್ನಾಗಿ ಇದ್ದೇನೆ. ಬಾರಿಯ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಎಂದರು.
ಇದು ಸತ್ಯ, ಅಸತ್ಯದ ನಡುವೆ ನಡೆಯುವ ಚುನಾವಣೆ. ೧೦ ವರ್ಷದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಿ ಮಾಡಿದ ಕೆಲಸಗಳು ಜನರಿಗೆ ತಿಳಿದಿದೆ. ಅವರ ಆಡಳಿತ ವೈಖರಿ ಇಷ್ಟ ಆಗಿದೆ. ಇದೇ ಕಾರಣಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ವಿಜಯಿ ಆಗಿ ಪ್ರಧಾನಿ ಆಗುವುದು ಖಚಿತ ಎಂದು ಅವರು ಭವಿಷ್ಯ ನುಡಿದರು.