ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಮುಖಂಡರ ನಡೆಯಿಂದಾಗಿ ಬೇಸತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಲಿದ್ದೇನೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದ ಕರಿಗಾರ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ನಾನು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿದ್ದೇನೆ. ಆದರೆ, ಈ ಬಾರಿ ನನಗೆ ಟಿಕೆಟ್ ನೀಡುತ್ತೇನೆ ಎಂದು ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದರು. ಆದರೆ, ಟಿಕೆಟ್ ನೀಡಲು ಪಕ್ಷದ ವರಿಷ್ಠರು ಹಿಂದೇಟು ಹಾಕುತ್ತಿದ್ದಾರೆ ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದರು.
ಒಂದು ವೇಳೆ ನನಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ ನಾನು ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಈ ಮೊದಲು ನಾನು ಪಕ್ಷೇತರ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ಗೆ ಎರಡು ಬಾರಿ ಆಯ್ಕೆಯಾಗಿದ್ದೇನೆ. ೨೦೧೮ ರಲ್ಲಿ ಕಾಂಗ್ರೆಸ್ ಮುಖಂಡರು ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆಗಲೂ ಟಿಕೆಟ್ ನೀಡಲಿಲ್ಲ. ಆದರೆ, ಇದೀಗ ಅವರು ನೀಡಿದ ಭರವಸೆ ಹುಸಿಯಾಗಿದೆ. ಹೀಗಾಗಿ ಈ ನಿರ್ಣಯ ಕೈಗೊಂಡಿದ್ದೇನೆ. ಟಿಕೆಟ್ ರೇಸ್ನಲ್ಲಿ ಎನ್.ಎಚ್. ಕೋನರಡ್ಡಿ ಹಾಗೂ ವಿನೋದ ಅಸೂಟಿ ಅವರ ಹೆಸರು ಹೈಕಮಾಂಡ್ನಲ್ಲಿ ಕೇಳಿ ಬರುತ್ತಿದೆ. ನನ್ನನ್ನು ಪಕ್ಷದವರು ನಿರ್ಲಕ್ಷಿಸಿದ್ದಾರೆ. ಎ.೧೩ ರಂದು ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮುನೇನಕೊಪ್ಪಗೆ ಧಮ್ ಇಲ್ಲ
ನನಗೆ ಸಲಹೆ ಸೂಚನೆ ನೀಡಲು ಸಚಿವ ಶಂಕರ ಪಾಟೀಲ ಮುನೇನಕೊಪ್ಪಗೆ ಧಮ್ ಇಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಈಗ ಕ್ಷೇತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಾನು ಹಲವು ದಿನಗಳಿಂದ ಕ್ಷೇತ್ರದ ರೈತರ ಕಷ್ಟಗಳಿಗೆ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುತ್ತ ಬಂದಿದ್ದೇನೆ. ನನಗೆ ಹೀಗೆ ಮಾಡು ಹಾಗೆ ಮಾಡು ಎಂದು ಸಲಹೆ ಸೂಚನೆ ನೀಡಲು ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಧಮ್ ಇಲ್ಲ. ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ನನ್ನ ವಿರುದ್ಧವೇ ಮುನೇನಕೊಪ್ಪ ಪರಾಭವಗೊಳ್ಳಲಿದ್ದಾರೆ. ಇದು ಶತಸಿದ್ಧ ಎಂದು ಬಹಿರಂಗವಾಗಿ ಸಾವಾಲೆಸೆದರು.