ಟಂಟಂ ಡಿಕ್ಕಿ: ವಿದ್ಯಾರ್ಥಿನಿ ಸಾವು

Advertisement

ಬೆಳಗಾವಿ: ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಅತಿವೇಗದಲ್ಲಿ ಬಂದ ಟಂಟಂ ವಾಹನ ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಬುಧವಾರ ಮಧ್ಯಾಹ್ನ ಚನ್ನಮ್ಮನ ಕಿತ್ತೂರಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಕಿತ್ತೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ 3ನೇ ಸೆಮಿಸ್ಟರ್‌ ಓದುತ್ತಿದ್ದ ಕಿತ್ತೂರು ‌ತಾಲೂಕಿನ ಉಗರಖೋಡ ಗ್ರಾಮದ ಕಾವೇರಿ ಕಾಜಗಾರ (21) ಎಂದು ಗುರುತಿಸಲಾಗಿದೆ. ಪ್ರತಿದಿನದಂತೆ ಇಂದು ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಕಾಲ್ನಡಿಗೆಯಲ್ಲಿ ಕಾವೇರಿ ಮನೆ ಕಡೆಗೆ ಹೊರಟಿದ್ದರು. ಆಗ ಏಕಾಏಕಿ ಅತಿವೇಗದಿಂದ ಬಂದ ಟಂಟಂ ವಾಹನ ಅವಳ ಮೇಲೆಯೇ ಹರಿದುಹೋದ ಪರಿಣಾಮ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಾ ಸ್ಥಳದಲ್ಲೇ ಕಾವೇರಿ ಮೃತಪಟ್ಟಿದ್ದಾಳೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಿತ್ತೂರು ಪೊಲೀಸರು ಆರೋಪಿ ವಾಹನ ಚಾಲಕ ದೇವಗಾಂವ್ ಗ್ರಾಮದ ಅನಿಲ್ ಚಿವುಟಗುಂಡಿಯನ್ನು ವಶಕ್ಕೆ ಪಡೆದಿದ್ದಾರೆ.
ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.