ಬಾಗಲಕೋಟೆ: ಮುಂಬರುವ ವಿಧಾನಸಭಾ ಚುನಾವಣೆ ಸಿದ್ಧತೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಜ. ೧೧ರಂದು ಬೆಳಗಾವಿಯಿಂದ ಆರಂಭಗೊಳ್ಳುವ ಪ್ರಜಾಧ್ವನಿ ಯಾತ್ರೆಯು ಜ.೧೮ರಂದು ಬಾಗಲಕೋಟೆಗೆ ಆಗಮಿಸಲಿದೆ. ಅಂದು ಬೆಳಗ್ಗೆ ೧೧ಕ್ಕೆ ನವನಗರದ ಕಾಳಿದಾಸ ಸಂಸ್ಥೆ ಮೈದಾನದಲ್ಲಿ ಜರುಗಲಿರುವ ಸಮಾವೇಶದಲ್ಲಿ ೫೦ ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಯಾತ್ರೆಯ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಎರಡು ಹಂತದಲ್ಲಿ ಯಾತ್ರೆ, ರ‍್ಯಾಲಿಗಳು ನಡೆಯಲಿವೆ. ಮೊದಲ ಹಂತದಲ್ಲಿ ಪ್ರಜಾಧ್ವನಿ ಯಾತ್ರೆ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿದ್ದು, ಫೆ. ೩ರಿಂದ ಎರಡನೇ ಹಂತದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರೂ ಯಾತ್ರೆಯನ್ನು ಸಂಘಟಿಸಲಾಗುತ್ತಿದೆ ಎಂದು ವಿವರಿಸಿದರು.