`ನಹಿ ಜ್ಞಾನೇನ ಸದೃಶಂ’ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ ಎಂಬುದು ಪ್ರಾಚೀನ ಗೀತಾಮೃತದ ಒಂದು ಆಣಿಮುತ್ತು. ಸೃಷ್ಟಿಯಲ್ಲಿ ಯಾವ ಪ್ರಾಣಿಗೂ ಇರದ ವಿಶೇಷ ಶಕ್ತಿ ಮಾನವನಿಗೆ ಇದೆ. ಅದೇ ಮನಸ್ಸು ಹಾಗು ನೆನಪಿನ ಶಕ್ತಿ. ಸೃಷ್ಟಿಯ ಎಲ್ಲಾ ಪ್ರಾಣಿಗಳನಂತೆ ಮನುಷ್ಯನೂ ತಾಯಿಯ ಗರ್ಭದಿಂದಲೇ ಕಲಿಕೆಯನ್ನು ಪ್ರಾರಂಭ ಮಾಡುತ್ತಾನೆ. ಅಕ್ಷರಜ್ಞಾನ, ವೇದ, ಉಪನಿಷತ್, ಪುರಾಣ ಗ್ರಂಥಗಳ ನಿರಂತರ ಕಲಿಕೆಯಿಂದ ಜ್ಞಾನ ಸಂಪಾದನೆ ಮಾಡುತ್ತಾ ದೇವರನ್ನು ಸಾಕ್ಷಾತ್ಕಾರ ಗೊಳಿಸಿಕೊಳ್ಳಲು ಬೇಕಾದ ದಾರಿಯನ್ನು ಹುಡುಕುಟುತ್ತಾ ಹೋಗುತ್ತಾನೆ.
ಜ್ಞಾನದಲ್ಲಿ ಎರೆಡು ವಿಧ, ಮೊದಲನೆಯದು ಗುರುಮುಖ ಪಾಠ ಪ್ರವಚನದಿಂದ ಬಂದ ಜ್ಞಾನ. ಎರಡನೇಯದು ಪ್ರಪಂಚ ಜ್ಞಾನ. ಅಂದರೆ ಅನುಭವದಿಂದ ಬರುವ ಜ್ಞಾನ. ಆ ಎರಡೂ ವಿಧವಾದ ಜ್ಞಾನ, ಆಳವಾದ ಚಿಂತನೆ, ಆಚರಣೆ, ಸದಾಚಾರ, ಸುಗುಣಗಳನ್ನು ಅಳವಡಿಸಿಕೊಂಡವನು ಪರಿಪೂರ್ಣ ವ್ಯಕ್ತಿಯಾಗುತ್ತಾನೆ. ಇನ್ನು ಜ್ಞಾನ ಸಂಪಾದನೆ ನಿಂತ ನೀರಲ್ಲ. ಆಳಕ್ಕೆ ಇಳಿದಷ್ಟೂ ಹೆಚ್ಚುತ್ತಾ ಹೋಗುತ್ತದೆ. ಕಲಿತಷ್ಟು ಕಲಿಯುವ ದಾಹ ಹೆಚ್ಚಾಗುತ್ತದೆ.
ಇನ್ನು ದೇವರನ್ನು ಸಾಕ್ಷಾತ್ಕಾರಿಸಿಕೊಳ್ಳಲು ಜ್ಞಾನ ಮುಖ್ಯವೋ ಭಕ್ತಿಮುಖವೋ ಎಂದು ನೋಡಿದಾಗ. ಒಬ್ಬ ಜ್ಞಾನಿ ದೇವರ ಸಾಕ್ಷಾತ್ಕಾರಗೊಳಿಸಿಕೊಳ್ಳಲು ತಾನು ಸಂಪಾದಿಸದ ಜ್ಞಾನದಿಂದ ದೇವರನ್ನು ಪ್ರಾರ್ಥಿಸುತ್ತಾ ಕಠಿಣವಾದ ವ್ರತ ತಪ್ಪಸ್ಸು ಮಾಡುತ್ತಿರುತ್ತಾನೆ. ಅಲ್ಲಿಗೆ, ಗುರುಮುಖದಿಂದ ಯಾವುದೇ ಶಾಸ್ತ್ರೀಯ ವಿದ್ಯೆ ಕಲಿಯದ ವ್ಯಕ್ತಿ ಬಂದು ನನಗೆ ಈಗಾಗಲೇ ದೇವರ ಸಾಕ್ಷಾತ್ಕಾರವಾಗಿದೆ.
ದೇವರನ್ನು ಒಲಿಸಿಕೊಂಡು ಮಾತನಾಡಿಸಿಕೊಂಡು ಬರುತ್ತಿದ್ದೇನೆ ಎಂದು ಹೇಳುತ್ತಾನೆ. ಜ್ಞಾನಿಗೆ ಈ ವಿಷಯ ತಿಳಿದು ಆಶ್ಚರ್ಯ ಆಗುತ್ತದೆ. ನಾನು ದೇವರ ಬಗ್ಗೆ ಪರಿಪೂರ್ಣ ಜ್ಞಾನ ಪಡೆದು, ಶಾಸ್ತ್ರಾಭ್ಯಾಸ ಮಾಡಿ ವೇದ, ಉಪನಿಷತ್, ವ್ಯಾಕರಣ ಪುರಾಣಗಳ ಬಲದಿಂದ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ ಆದರೆ ಸಫಲನಾಗಿಲ್ಲ. ಇದೆಲ್ಲವೂ ಇಲ್ಲದೆ ಈ ವ್ಯಕ್ತಿ ಹೇಗೆ ದೇವರನ್ನು ಸಾಕ್ಷಾತ್ಕಾರ ಗೊಳಿಸಿಕೊಂಡ ಎನ್ನುವ ಯಕ್ಷ ಪ್ರಶ್ನೆ ಹಾಕಿಕೊಂಡು. ಅದನ್ನು ಅರಿಯಲು ದೇವರನ್ನೇ ಕುರಿತು ಮತ್ತೆ ತಪಸ್ಸು ಮಾಡುತ್ತಾನೆ.
ದೇವರು ಆ ಜ್ಞಾನಿಗೆ ಪ್ರತ್ಯಕ್ಷನಾಗಿ ನಿನ್ನ ಜ್ಞಾನದಿಂದ ನನ್ನನ್ನು ಆರಾಧಿಸಿದ ರೀತಿಗೆ ನಾನು ಪ್ರಸನ್ನನಾಗಿದ್ದೇನೆ. ಎಂದಾಗ. ಆ ಜ್ಞಾನಿ ದೇವರಿಗೆ, ಜ್ಞಾನದಿಂದ ನಿನ್ನನ್ನು ನೋಡುವ ನನಗಿಂತ ಮುಂಚಿತವಾಗಿ ಅಜ್ಞಾನಿಯಾದ ಆ ವ್ಯಕ್ತಿಗೆ ಮೊದಲು ದರ್ಶನ ಕೊಟ್ಟೆ.. ಇದರ ಔಚಿತ್ಯವೇನು? ಇದು ನಿನಗೆ ಸರಿಯೇ ಎಂದು ಕೇಳುತ್ತಾನೆ.
ಭಗವಂತ ನಗುತ್ತಾ ಹೇಳುತ್ತಾನೆ, ನೀನು ಜ್ಞಾನದಿಂದ ನನ್ನನ್ನೇನೋ ಪ್ರಾರ್ಥಿಸಿದೆ, ಆದರೆ ಅದರ ಜೊತೆ ನನಗೆ ಮಾತ್ರ ಜ್ಞಾನ ಇದೆ ಎನ್ನುವ ಅಹಂ ನಿನ್ನಲ್ಲಿ ಇದ್ದುದರಿಂದ ನನ್ನನ್ನು ಕಾಣಲು ನಿನಗೆ ವಿಳಂಬವಾಯಿತು. ಆದರೆ ಆ ವ್ಯಕ್ತಿ ಅಜ್ಞಾನಿ ಪುಸ್ತಕದ ಜ್ಞಾನವಿಲ್ಲ, ಆದರೆ ಅವನ ಮಸ್ತಕದಲ್ಲಿ ನನ್ನ ಮೇಲೆ ಅಚಲವಾದ ಭಕ್ತಿ, ತದೇಕಚಿತ್ತದಿಂದ ನಿರಂತರ ಪ್ರಾರ್ಥಿಸಿ ನನ್ನನ್ನು ಒಲಿಸಿಕೊಂಡ. ಅಲ್ಲಿ ಅಹಂಕಾರದ ಸುಳಿವು ಇರಲಿಲ್ಲ ಅದಕ್ಕಾಗಿ ಅವನಿಗೆ ನಾನು ಮೊದಲು ದರ್ಶನ ಕೊಟ್ಟೆ ಎಂದು ತಿಳಿಸುತ್ತಾನೆ.
ಈ ಪ್ರಸಂಗದಿಂದ ತಿಳಿಯುವುದೇನೆಂದರೆ ಪ್ರತಿಯೊಬ್ಬ ವ್ಯಕ್ತಿಯು ಗುರುವಿನಿಂದ ಜ್ಞಾನ ಸಂಪಾದನೆ ಮಾಡಲೇಬೇಕು. ಅಹಂಕಾರವಿಲ್ಲದ ಜ್ಞಾನ, ಭಕ್ತಿಯುಕ್ತವಾದ ಜ್ಞಾನ ಸಂಪಾದಿಸಿಕೊಂಡರೆ ದೇವರನ್ನು ಒಲಿಸಿಕೊಳ್ಳುವುದು ಸುಲಭ. ದೇವರನ್ನು ಹೇಗೆ ಭಜಿಸಿದೆ ಎನ್ನುವುದಕ್ಕಿಂತ, ಎಷ್ಟು ಭಕ್ತಿಯಿಂದ ಭಜಿಸಿದೆ ಎನ್ನುವುದು ಮುಖ್ಯ. ಭಕ್ತಿಯುಕ್ತವಾದ ಜ್ಞಾನ ದೇವರನ್ನು ಸಾಕ್ಷಾಕ್ತರಿಸಿಕೊಳ್ಳಲು ಸಹಕಾರಿ. ದೇವರ ಆಶೀರ್ವಾದವಿದ್ದರೆ ಜ್ಞಾನ, ಜ್ಞಾನದಿಂದ ಭಕ್ತಿ, ಭಕ್ತಿಯಿಂದ ಮುಕ್ತಿ ಪಡಿಯಲು ಸರ್ವರಿಗೂ ಸಾಧ್ಯ.