ಬೆಂಗಳೂರು: ಜ್ಞಾನವು ಸಮಾಜ, ದೇಶ ಹಾಗೂ ವಿಶ್ವದ ಒಳಿತಿಗೆ ಬಳಕೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಂದಲೂ ಕಲಿಯಲು ಬಹಳಷ್ಟಿರುತ್ತದೆ. ಮಕ್ಕಳು, ಶಿಕ್ಷಕರಿಗೆ ತಮ್ಮದೇ ಆದ ಬುದ್ಧಿಮತ್ತೆ ಇರುತ್ತದೆ. ಅವುಗಳನ್ನು ಗೌರವಿಸಬೇಕು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ತಮ್ಮ ಯಶವನ್ನು ಕಾಣಬೇಕು. ಒಳ್ಳೆಯ ಕೆಲಸ ಮಾಡಿದ ನಂತರದ ಚಿಂತನೆ ನಮ್ಮಲ್ಲಿ ಪ್ರೇರಣೆಯನ್ನು ತುಂಬುತ್ತದೆ. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಸಾವಿನ ನಂತರವೂ ಜನರ ಮನಸ್ಸಿನಲ್ಲಿ ನಿಲ್ಲುವವನು ನಿಜವಾದ ಸಾಧಕ. ಯಶಸ್ಸು ಬೇರೆ, ಸಾಧನೆ ಬೇರೆ. ನಿಮ್ಮ ಯಶಸ್ಸು, ಜನರಿಗೆ ಪ್ರಯೋಜನವಾದರೆ ಅದು ನಿಜವಾದ ಸಾಧನೆ. ನಿಮ್ಮ ಜ್ಞಾನ ಸಮಾಜ, ದೇಶ ಹಾಗೂ ವಿಶ್ವದ ಒಳಿತಿಗೆ ಬಳಕೆಯಾಗಬೇಕು ಎಂದು ತಿಳಿಸಿದರು.