ನವದೆಹಲಿ: ಜ್ಞಾನವಾಪಿ ಮಸೀದಿಯ ವ್ಯಾಸ್ ತೆಹಖಾನಾದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಿರುವ ತೀರ್ಪನ್ನು ಪ್ರಶ್ನಿಸಿದ ಮಸೀದಿ ನಿರ್ವಹಣಾ ಸಮಿತಿಯ ಅರ್ಜಿ ಕುರಿತಂತೆ ಸೋಮವಾರ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ವ್ಯಾಸ್ ತೆಹಖಾನದಲ್ಲಿ ಪೂಜೆ ಮಾಡಲು ಕೆಳಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಅದನ್ನು ಪ್ರಶ್ನಿಸಿದ ಮಸೀದಿ ಸಮಿತಿಯ ಅರ್ಜಿಯನ್ನು ಹೈಕೋರ್ಟ್ ಫೆ. ೨೬ರಂದು ತಿರಸ್ಕರಿಸಿತ್ತು. ಹಾಗೆಯೇ ಈ ತೆಹಖಾನಾದಲ್ಲಿ ಪೂಜೆ ಸಲ್ಲಿಸದಂತೆ ಉತ್ತರಪ್ರದೇಶ ಸರ್ಕಾರ ೧೯೯೩ರಲ್ಲಿ ನಿಷೇಧಿಸಿರುವ ಕ್ರಮವನ್ನೂ ಕಾನೂನುಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಸೋಮವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ನ್ಯಾಯಪೀಠ ಈ ಬಗ್ಗೆ ವಿಚಾರಣೆ ನಡೆಸಲಿದೆ.