ಹುಬ್ಬಳ್ಳಿ: ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಪ್ಪ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಬುಧವಾರ ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹುಬ್ಬಳ್ಳಿ ನಿವಾಸಕ್ಕೆ ಭೇಟಿ ನೀಡಿದ ಅವರು, ತಮ್ಮ ಮೇಲೆ ನಡೆದ ದೌರ್ಜನ್ಯದ ಕುರಿತು ವಿವರಿಸಿ, ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡರು. ಹರ್ಷಿಕಾ ದಂಪತಿಗಳ ಸಮಸ್ಯೆ ಆಲಿಸಿದ ಪ್ರಹ್ಲಾದ ಜೋಶಿ, ಚುನಾವಣೆ ಮುಗಿದ ನಂತರ ಸೂಕ್ತ ಕ್ರಮದ ಭರವಸೆ ನೀಡಿದರು. ಅಲ್ಲದೆ, ನಿಮ್ಮ ಜೊತೆ ನಾವಿದ್ದೇವೆ, ಧೈರ್ಯಗೆಡಬೇಡಿ ಎಂದು ಧೈರ್ಯ ಹೇಳಿದರು.
ಇದೇ ವೇಳೆ ಮಾತನಾಡಿದ ಹರ್ಷಿಕಾ, ನಾವು ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ. ನಮಗೆ ಆದ ತೊಂದರೆಗೆ ಪ್ರಹ್ಲಾದ್ ಜೋಶಿ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ನಮ್ಮ ಕುಟುಂಬ ಯಾರ ತಂಟೆಗೂ ಹೋಗದೆ ನಮ್ಮ ಪಾಡಿಗೆ ನಾವಿದ್ದೇವೆ. ರೆಸ್ಟೋರೆಂಟ್‌ಗೆ ಹೋದ ಸಂದರ್ಭದಲ್ಲಿ ಕನ್ನಡ ಮಾತಾಡಿದ್ದಕ್ಕೆ ನಮ್ಮ ಜೊತೆ ಜಗಳ ತೆಗೆದ ಕೆಲವರು ತೊಂದರೆ ಮಾಡಿದ್ದರು. ಆ ವೇಳೆ ಸಾಕಷ್ಟು ಜನರು ಜಮಾಯಿಸಿ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದರು. ಕತ್ತಲ್ಲಿದ್ದ ಚೈನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಸೆಲೆಬ್ರಿಟಿಗಳಿಗೇ ಹೀಗಾದರೆ ಜನಸಾಮಾನ್ಯರ ಸ್ಥಿತಿಯೇನು ಎಂದು ಹರ್ಷಿಕಾ ಪ್ರಶ್ನಿಸಿದರು.
ನಟ ಭುವನ್ ಮಾತನಾಡಿ, ದೌರ್ಜನ್ಯ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಹ್ಲಾದ ಜೋಶಿ ಅವರು ಭರವಸೆ ನೀಡಿದ್ದಾರೆ. ಅವರ ಭೇಟಿಯಿಂದ ಧೈರ್ಯ ಬಂದಿದೆ. ಬೆಂಗಳೂರು ಪೊಲೀಸರೂ ಉತ್ತಮ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ಆರೋಪಿಗಳನ್ನು ಗುರುತಿಸಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.