ಜೈಲಿನಲ್ಲಿದ್ದ ಅಮಿತ್ ಶಾ ಪ್ರಚಾರ ಮಾಡುತ್ತಿಲ್ಲವೇ?

ಸಿದ್ದರಾಮಯ್ಯ
Advertisement

ದಾವಣಗೆರೆ: ಬಿಜೆಪಿಯ ಕೇಂದ್ರ ಗೃಹಸಚಿವ ಅಮಿತ್ ಶಾ ಹಿಂದೆ ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದು, ಗಡಿಪಾರಾಗಿದ್ದವರು. ಬಿಜೆಪಿಯಲ್ಲೇ ಸಾಕಷ್ಟು ಜನ ಜಾಮೀನಿನ ಮೊರೆ ಹೋಗಿ ಹೊರಗಿದ್ದಾರೆ. ಇವರೇ ಪ್ರಚಾರ ಮಾಡುತ್ತಿಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರು ಡಿಕೆಶಿ ವಿರುದ್ಧ ಮಾಡಿರುವ ಟೀಕೆಗೆ ತಿರುಗೇಟು ನೀಡಿದ್ದಾರೆ.
ಜಗಳೂರಿನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಜೈಲಿಗೆ ಹೋಗಿ, ಬರೋದು ಬೇರೆ ವಿಷಯ. ನಾಡಿನ ಜನರ ಮನಸ್ಸಿನಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆಯೆಂಬ ಪ್ರಶ್ನೆ ಇದೆ. ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಹೀಗೆ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬಂದರೆ ಬಿಜೆಪಿ ಸರ್ಕಾರದ ಶೇ. ೪೦ ಭ್ರಷ್ಟಾಚಾರ ಹೋಗಲಾಡಿಸುತ್ತಾರಾ? ೪೦ ಪರ್ಸೆಂಟ್ ಕಳಂಕ ತೆಗೆದು ಹಾಕುತ್ತಾರಾ ಎಂದು ಅವರು ಪ್ರಶ್ನಿಸಿದರು.
ಎಐಸಿಸಿ ನಾಯಕಿ ಸೋನಿಯಾ ಗಾಂಧಿಯವರನ್ನು ವಿಷ ಕನ್ಯೆ ಎಂಬುದಾಗಿ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದು, ನಾಲಿಗೆ ಮೇಲೆ ಸುಸಂಸ್ಕೃತಿ ಇಲ್ಲದ ಜನ ಇಂತಹವರು. ಇಂತಹ ಹೇಳಿಕೆಯಿಂದ ಜನರಲ್ಲಿ ದ್ವೇಷ ಶುರುವಾಗುತ್ತದೆ. ಸಂಸ್ಕೃತಿ ಇಲ್ಲದವರು ರಾಜಕೀಯದಲ್ಲಿ ಇರುವುದಕ್ಕೂ ನಾಲಾಯಕ್ ಎಂದು ಯತ್ನಾಳ್ ವಿರುದ್ಧ ಅವರು ಹರಿಹಾಯ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯ ಸ್ಪರ್ಧೆ ಮಾಡಿದವರ ಜೊತೆಗೆ ನಾನು ಮಾತನಾಡಿದ್ದೇನೆ. ಹಿಂದೆ ಸರಿಯದಿದ್ದರೆ ಅಂತಹವರನ್ನು ಪಕ್ಷದಿಂದ ತೆಗೆದುಹಾಕುತ್ತೇವೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿ ನಾವೇ ಸಾಕು ಪ್ರಚಾರ ಮಾಡುವುದಕ್ಕೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.