ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ, ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಗೆ ಪ್ರಬಲ ಬಿಜೆಪಿ ನಾಯಕ,ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂ ಬಿಜೆಪಿ ಲಗ್ಗೆ ಹಾಕಲು ಸಕಲ ಸಿದ್ಧತೆಗಳೊಂದಿಗೆ ಇಳಿದಿದೆ.
ಜಿಲ್ಲೆಗೆ ಲಗ್ಗೆ
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಂಡ್ಯ ಜಿಲ್ಲೆಗೆ ಮನ್ಮುಲ್ ಮೆಗಾ ಡೇರಿ ಉದ್ಘಾಟಿಸಿ,ಸುಮ್ಮನೆ ಹೋಗುತ್ತಿಲ್ಲ.ಜಿಲ್ಲೆಯಲ್ಲಿ ಬಿಜೆಪಿ ಬೇರುಗಳನ್ನು ಮತ್ತಷ್ಟು ಗಟ್ಟಿ ಮಾಡಲು ಜನ ಸಂಕಲ್ಪ ಯಾತ್ರೆಯ ಮೂಲಕ ನಾಂದಿ ಹಾಡಿದ್ದಾರೆ.ಅಮಿತ್ ಶಾ ಆಗಮಿಸುತ್ತಿರುವುದು ಚುನಾವಣಾ ಚಟುವಟಿಕೆಯ ವೇಗವನ್ನು ಹೆಚ್ಚಿಸಿದ್ದಲ್ಲದೆ,ಪಕ್ಷದ ಹಾಗೂ ಕಾರ್ಯಕರ್ತರಿಗೆ ಅಮಿತ ಉತ್ಸಾಹ ತಂದಿದೆ.2018 ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಎಲ್ಲಾ ಏಳು ಕ್ಷೇತ್ರಗಳಲ್ಲಿ ಭಾರೀ ಅಂತರದಿಂದ ಗೆಲ್ಲುವ ಮೂಲಕ ಜೆಡಿಎಸ್ ಭದ್ರಕೋಟೆ ಎಂದು ಸಾಬೀತು ಪಡಿಸಿದ್ದರು.ಜೆಡಿಎಸ್ ಸ್ಪರ್ಧಿಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ದೊಡ್ಡ ಅಂತರದಿಂದ ಮಕಾಡೆ ಮಲಗಿಸಿದ್ದರು.ನಂತರ ಕೆ.ಆರ್.ಪೇಟೆಯ ಕೆ.ಸಿ.ನಾರಾಯಣಗೌಡ ಬಿಜೆಪಿಗೆ ಸೇರಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಪಂ.ಮಾಜಿ ಸದಸ್ಯ ಬಿ.ಎಲ್.ದೇವರಾಜು ಅವರನ್ನು ಸೋಲಿಸುವ ಮೂಲಕ ಮೊತ್ತ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಕಮಲ ಅರಳುವುದಕ್ಕೆ ಕಾರಣರಾದರು.ಆಗಿನ ಸಿಎಂ ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರ ಎಲ್ಲಾ ಪಟ್ಟುಗಳನ್ನು ಹಾಕಿ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿದರು. ಇದು ಮಂಡ್ಯ ಜೆಡಿಎಸ್ ಭದ್ರಕೋಟೆ ಎಂದು ಬೀಗುತ್ತಿದ್ದ ಜೆಡಿಎಸ್ ವರಿಷಗಾದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ನುಂಗಲಾರದ ತುತ್ತಾಗಿತ್ತು. ಕೆ.ಆರ್.ಪೇಟೆಯಲ್ಲಿ ನಡೆದ ಮ್ಯಾಜಿಕ್ ಅನ್ನು ಎಲ್ಲಾ ಕ್ಷೇತ್ರದಲ್ಲಿಯೂ ಮಾಡಲು ಬಿಜೆಪಿಗರು ಚುನಾವಣಾ ತಂತ್ರದಲ್ಲಿ ನಿಪುಣರಾಗಿರುವ ಅಮಿತ್ ಶಾ ಮೂಲಕ ಲಗ್ಗೆಯಿಟ್ಟಿದ್ದಾರೆ.ಅದಕ್ಕೆ ಜನ ಸಂಕಲ್ಪ ಯಾತ್ರೆ ವೇದಿಕೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಈ ಬಾರಿ ಅಷ್ಟು ಸರಳವಾಗಿಲ್ಲ ಎಂಬ ಮಾಹಿತಿ ಪಡೆದಿರುವ ಅಮಿತ್ ಶಾ ಹಳೇ ಮೈಸೂರು ಪ್ರಾಂತ್ಯದ ಮೇಲೆ ಕಣ್ಣಿಟ್ಟಿದ್ದಾರೆ.ಅದಕ್ಕಾಗಿ ವ್ಯವಸ್ಥಿತವಾಗಿ ಜಿಲ್ಲೆಯಲ್ಲಿ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಪ್ರಬಲ ಅಭ್ಯರ್ಥಿಗಳ ಸೇರ್ಪಡೆ
ಈ ಬಾರಿ ಪ್ರತಿ ಕ್ಷೇತ್ರವೂ ನಿರ್ಣಾಯಕ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಚುನಾವಣಾ ಉಸ್ತುವಾರಿಯನ್ನು ಅಮಿತ್ ಶಾ ತಾವೇ ವಹಸಿಕೊಂಡಿದ್ದಾರೆ.ಆ ಭಾಗವಾಗಿಯೇ ಜಿಲ್ಲೆಯಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಈಗಾಗಲೇ ಬಿಜೆಪಿ ಪಕ್ಷಕ್ಕೆ ಸೆಳೆದು ಕೊಳ್ಳಲಾಗಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಕ – ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಮಾಜಿ ಸಚಿವ ಎಸ್.ಡಿ.ಜಯರಾಂ ಪುತ್ರ ಅಶೋಕ್ ಜಯರಾಂ ಸೇರ್ಪಡೆ ಆಗಿದಾರೆ.ಅಶೋಕ್ ಜಯರಾಂ ಜೊತೆ ಚಂದಗಾಲು ಶಿವಣ್ಣ,ಸಿ.ಪಿ.ಉಮೇಶ್ ಅಂತಹವರು ಟಿಕೆಟ್ ಪಡೆಯಲು ಸನ್ನದ್ದರಾಗಿದ್ದಾರೆ. ಮದ್ದೂರಿನಲ್ಲಿ ಎಸ್.ಪಿ.ಸ್ವಾಮಿ,ಮೇಲುಕೋಟೆಯಲ್ಲಿ ಇಂದ್ರೇಶ್, ನಾಗಮಂಗಲದಲ್ಲಿ ಫೈಟರ್ ರವಿ,ಮಳವಳ್ಳಿಯಲ್ಲಿ ಮುನಿರಾಜು,ಮಾಜಿ ಸಚಿವ ಸೋಮಶೇಖರ್, ಕೆ.ಆರ್. ಪೇಟೆಯಲ್ಲಿ ಸಚಿವ ನಾರಾಯಣ ಗೌಡ ಟಿಕೆಟ್ ಸಿಗುವ ಉತ್ಸಾಹದಲ್ಲಿದ್ದಾರೆ.ಸುಮಲತಾ ಅಂಬರೀಶ್ ಆಪ್ತ ಇಂಡುವಾಳು ಸಚ್ಚಿದಾನಂದ ಸಾಕಷ್ಟು ಪ್ರಬಲ ಅಭ್ಯರ್ಥಿಯಾಗಿಯೇ ಬಿಜೆಪಿ ಸೇರಿದ್ದಾರೆ.ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಹೇಳಿ ಕೊಳ್ಳುವಂತಹ ಅಭ್ಯರ್ಥಿ ಗಳು ಸಿಕ್ಕಿರಲಿಲ್ಲ.ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ.ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ಎಲೆಕ್ಷನ್ ಎಕ್ಸಫರ್ಟ್ ಅಮಿತ್ ಶಾ ಮಂಡ್ಯ ಜಿಲ್ಲೆಗೆ ಕಾಲಿಡುತ್ತಿದ್ದಾರೆ.
ಪಂಚರತ್ನ ಹುಮ್ಮಸ್ಸು
ಈಗಾಗಲೇ ಜೆಡಿಎಸ್ ಪಕ್ಷ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಂಚರತ್ನ ಯಾತ್ರೆ ಯಶಸ್ವಿಯಾಗಿ ನಡೆದು, ಚುನಾವಣೆಗೆ ರಣಕಹಳೆ ಮೊಳಗಿಸಿದೆ.
ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆಗೆ ಸಿಕ್ಕಿದ ಜನಸ್ಪಂದನದಿಂದ ಜೆಡಿಎಸ್ ಅಭ್ಯರ್ಥಿಗಳು,ನಾಯಕರು, ಕಾರ್ಯಕರ್ತರು ಸಖತ್ ಖುಷಿಯಾಗಿದ್ದಾರೆ.ಮತ್ತೆ ಏಳು ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ ಎಂದು ಬೀಗುತ್ತಿದ್ದಾರೆ.
ಭಾರತ್ ಜೋಡೋ ಯಶಸ್ಸು ಕಾಂಗ್ರೆಸ್ ಪಕ್ಷ ಕೂಡ ರಾಹುಲ್ ಗಾಂಧಿಯವ ಭಾರತ್ ಜೋಡೋ ಯಾತ್ರೆಯಿಂದ ಬಹಳ ಹುಮ್ಮಸ್ಸು ಪಡೆದಿದೆ.ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಸೋತು ಕಂಗಲಾಗಿದ್ದವರಿಗೆ ಭಾರತ್ ಜೋಡೋ ,ದಿನೇಶ್ ಗೂಳಿಗೌಡ, ಮಧು ಮಾದೇಗೌಡರ ಗೆಲುವು ಕಾಂಗ್ರೆಸ್ ಗೆ ಶಕ್ತಿ ತುಂಬಿದೆ. ಈಗಾಗಲೇ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರಿಗೆ ನೀಡಿದೆ.
ಅಮಿತೋತ್ಸಾಹ
ಜಿಲ್ಲೆಗೆ ಅಮಿತ್ ಶಾ ಎಂಟ್ರಿ ನೀಡುತ್ತಿರುವುದು ಬಿಜೆಪಿ ಮುಖಂಡರು ಹಾಗೂ ಕಾರ್ಯತ್ರರಿಗೆ ಅಮಿತೋತ್ಸಾಹ ತುಂಬಿದೆ.ಚುನಾವಣಾ ತಂತ್ರಗಾರ ಅಮಿತ್ ಶಾ ಬಂದ ನಂತರ ಜಿಲ್ಲೆಯಲ್ಲಿ ಮಹತ್ವದ ಬದಲಾವಣೆ ಆಗುವ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರು,ಕಾರ್ಯಕರ್ತರಿದ್ದಾರೆ.ಗುಜರಾತ್ ಚುನಾವಣಾ ಗೆಲುವಿನಲ್ಲಿ ಭಾಗಿಯಾಗಿದ್ದ ಅಮಿತ್ ಶಾ ಕರ್ನಾಟಕದಲ್ಲೂ ಮ್ಯಾಜಿಕ್ ಮಾಡಿ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಹಾಕುತ್ತಾರೋ ಇಲ್ಲವೋ ಎಂಬುದನ್ನು ಚುನಾವಣಾ ಫಲಿತಾಂಶ ನಿರ್ಧರಿಸಲಿದೆ