ವಿಜಯಪುರ: ಸಿಂದಗಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ(ಸೋಮಜ್ಯಾಳ) (೫೪) ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ರಾತ್ರಿ ಸಂಬಂಧಿಕರೊಬ್ಬರ ಮನೆಗೆ ಹೋದಾಗ, ಕುಡಿಯಲು ನೀರು ಕೇಳುತ್ತಲೇ ತಲೆಸುತ್ತಿ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದಾಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಮೂಲ ಬಿಜೆಪಿಗರಾಗಿದ್ದ ಪಾಟೀಲರು ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಕಳೆದ ಜ. 18ರಂದು ಪಂಚರತ್ನ ರಥಯಾತ್ರೆಯನ್ನು ಯಶಸ್ವಿಯಾಗಿಸಿದ್ದರು. ಕ್ಷೇತ್ರದಲ್ಲಿನ ಅನಾಥರ, ದೀನ ದಲಿತರ, ಬಡವರಿಗೆ ಕೋವಿಡ್ ಕಾಲದಲ್ಲಿ ಮಾನವೀಯತೆ ತೋರುತ್ತ ತಮ್ಮ ಸಹಾಯ ಹಸ್ತ ಚಾಚುತ್ತ, ಬಡವರ ಬಂಧುವಾಗಿ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ್ದರು
ನಿವೃತ್ತ ಸೈನಿಕರಾಗಿದ್ದ ಇವರು ಮೂಲತಃ ಸಿಂದಗಿ ತಾಲೂಕಿನ ಸೋಮಜ್ಯಾಳದವರಾಗಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿಯರಿದ್ದಾರೆ.