ಕುಷ್ಟಗಿ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತುಕರಾಮ ಸುರ್ವೇ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಫೆ. 3ರಂದು ಗಂಗಾವತಿಯಲ್ಲಿ ಗಾಲಿ ಜನಾರ್ಧನ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ಕರ್ನಾಟಕ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಎಂ. ಹಿರೇಮಠ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ತುಕರಾಮ ಅವರು ಒಳ್ಳೆಯ ವ್ಯಕ್ತಿ, ಆದರೆ ಅವರ ಹಿಂಬಾಲಕರಾದ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಕುಂಬಾರರ ಮಾತು ಕೇಳಿ ಕಡೆಗಣಿಸಿದ್ದಾರೆ. ತಾಲೂಕಿನಾದ್ಯಂತ ಸುಮಾರು 16 ವರ್ಷಗಳ ಕಾಲ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಿ ಕಟ್ಟಿ ಬೆಳೆಸಿ ಇಂದು ಪಕ್ಷಕ್ಕೆ ರಾಜನಾಮೆ ನೀಡಿದ್ದು ಪಕ್ಷ ಬಿಡಲು ನೋವಾಗುತ್ತಿದೆ. ಯಾರದೋ ಮಾತು ಕೇಳಿ ನನ್ನನ್ನು ಹಾಗೂ ನಮ್ಮ ಮುಖಂಡರನ್ನು ಕಡೆಗಣಿಸಿದ್ದಾರೆ. ಕಳೆದ ಬಾರಿಯೂ ನನಗೆ ಟಿಕೆಟ್ ನೀಡಲಿಲ್ಲ. ಆದರೂ ನಾನು ಇದುವರೆಗೂ ಪರೋಕ್ಷವಾಗಿ ಬಿಫಾರಂಗೆ ಪ್ರಯತ್ನಿಸಿಲ್ಲ. ನಾನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಡೀ ರಾಜ್ಯದ ಜನತೆಗೆ ನೀಡಿರುವ ಕೊಡುಗೆಗಳು, ರೈತರಿಗಾಗಿ ನೀಡಿರುವ ಯೋಜನೆಗಳಿಂದ ನಾನು ಅಭಿಮಾನದಿಂದ ಜೆಡಿಎಸ್ ಸೇರಿದ್ದೆ. ಕುಮಾರಸ್ವಾಮಿ ಮೇಲೆ ಅಭಿಮಾನದಿಂದ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ನಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಮತ್ತೆ ವಾಪಾಸ್ ಹೋಗುವ ಮಾತಿಲ್ಲ ಎಂದರು.