ಜೀವ ತೆಗೆದ ಬಾಡಿಗೆ ಮನೆ

ವೃದ್ಧೆ ಸಾವು
Advertisement

ಗದಗ: ಮಳೆಯಿಂದ ನೆನೆದಿದ್ದ ಮಣ್ಣಿನ ಮನೆ ಗೋಡೆ ಕುಸಿದು ಬೆಟಗೇರಿಯ ಕುಲಕರ್ಣಿ ಗಲ್ಲಿಯಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿ ಇಬ್ಬರಿಗೆ ತೀವ್ರ ಗಾಯಗಳಾದ ಘಟನೆ ವರದಿಯಾಗಿದೆ.
ಮನೆ ಕುಸಿತದಿಂದ ಸಾವನ್ನಪ್ಪಿದ ವೃದ್ಧೆಯನ್ನು ಸುಶೀಲವ್ವ ಕಲ್ಮಠ(60) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಅಡಿವೆಯ್ಯ ಕಲ್ಮಠ, ಬಸಮ್ಮ ನಡಕಟ್ಟಿ ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಶಿಥಿಲಗೊಂಡಿದ್ದ ಗೋಡೆ ಬೆಳಗಿನ ಜಾವ ಕುಸಿದಿದೆ. ಪರಿಣಾಮ ಹಾಲ್‌ನಲ್ಲಿ ಮಲಗಿದ್ದ ಸುಶೀಲವ್ವ ಕಲ್ಮಠ, ಬಸಮ್ಮ ನಡಕಟ್ಟಿನ ಅವರ ಮೇಲೆ ಗೋಡೆ ಬಿದ್ದಿದೆ. ಮನೆಯ ಮತ್ತೊಂದು ಭಾಗದಲ್ಲಿ ಮಲಗಿದ್ದ ಅಡವಯ್ಯ ಕಲ್ಮಠ ಗೋಡೆ ಕುಸಿದ ತಕ್ಷಣ ಕುಟುಂಬಸ್ಥರು ಗೋಡೆಯ ಅವಶೇಷಗಳ ಅಡಿಸಿಲುಕಿದ್ದನ್ನ ಗಮನಿಸಿ ಮನೆಯ ಸುತ್ತಮುತ್ತಲಿನ ಜನರನ್ನು ಕರೆದು ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರನ್ನ ರಕ್ಷಿಸಿದ್ದಾರೆ.
ಅಡವಯ್ಯನ ಮೊಮ್ಮಗ ಪುಟ್ಟರಾಜ ಖಾಸಗಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಅವರು ರಾತ್ರಿಯೇ ಕೆಲಸಕ್ಕೆ ಹೋಗಿದ್ದರೆಂದು ಹೇಳಲಾಗಿದೆ.
ಜೀವಕ್ಕೆ ಕಂಟಕವಾಯ್ತು ಬಾಡಿಗೆ ಮನೆ:
ರೋಣ ತಾಲೂಕಿನ ಅಸೂಟಿ ಮೂಲದವರಾದ ಅಡವಯ್ಯ ಕಲ್ಮಠ ಅವರ ಮೊಮ್ಮಗ ಗದಗನಲ್ಲಿ ಕೆಲಸ ಮಾಡುತ್ತಿದ್ದಾನೆ. ಇದರಿಂದಾಗಿ ಈ ಕುಟುಂಬ ಗದಗನಲ್ಲಿ ನೆಲೆಸಿದೆ. ಕಡಿಮೆ ಬಾಡಿಗೆ ಕಾರಣದಿಂದ ಬೆಟಗೇರಿಯ ಕುಲಕರ್ಣಿ ಬಡಾವಣೆಯಲ್ಲಿ ಬಾಡಿಗೆ ಮನೆ ಹಿಡಿದಿದ್ದರು. ಕಳೆದ ಎರಡು ವರ್ಷದಿಂದ ಖಾಲಿಯಾಗಿದ್ದ ಮನೆಯನ್ನ ಬಾಡಿಗೆ ನೀಡಿದ್ದರೆನ್ನಲಾಗಿದೆ. ತಂದೆಯನ್ನು ಭೇಟಿ ಮಾಡಲು ಬಸಮ್ಮ ನಡಕಟ್ಟಿನ ಅವರು ಮನೆಗೆ ಬಂದಿದ್ದರೆಂದು ತಿಳಿದು ಬಂದಿದೆ.