ಮಾನವ ಬದುಕಿನ ಜೀವನದುದ್ದಕ್ಕೂ ಹಗಲಿರುಳು ಸೋಲು ಗೆಲುವಿನ ಸಂಘರ್ಷ ಇದ್ದಿದ್ದೇ.
ಅದರಲ್ಲೇ ಕಾಲ ಕಳೆಯುತ್ತ ಬರುತ್ತಾನೆ. ಬದುಕಿನ ಪ್ರತಿಯೊಂದು ಹಂತದಲ್ಲಿ ಕಷ್ಟ ಸುಖ ನೋವು ನಲಿವು ಪ್ರತಿಯೊಂದಕ್ಕೂ ಸಮಾನವಾಗಿ ಸ್ವೀಕರಿಸಿ ಭಗವಂತನ ನಿಯಮದಂತೆ ಜೀವನ ಸಾಗಿಸುವದನ್ನು ಕಲಿಯಬೇಕು.
ಭಗವಂತ ಈ ಭೂಮಿಯ ಮೆಲೆ ಮನುಷ್ಯನ ಅನುಕುಳಕ್ಕಾಗಿ ನಿಸರ್ಗದ ಎಲ್ಲ ಪ್ರತಿಯೊಂದು ವಸ್ತುವನ್ನು ದಯಪಾಲಿಸಿದ್ದಾನೆ. ನಿಸರ್ಗ ಕೇವಲ ಮಾನವ ಸೊತ್ತಲ್ಲ. ಬದಲಾಗಿ ಇಡೀ ಜಗದ ಜೀವಿಗಳೆದರ ಸೊತ್ತು. ಈ ಪ್ರಜ್ಞೆ ಮನುಷ್ಯರಿಗೆ ಇರಲೇಬೇಕು. ತನಗಾಗಿ ಎಂಬ ಭಾವದಿಂದ ದೂರ ಬಂದು ನಮ್ಮೆಲ್ಲರಿಗಾಗಿ ಎಂದರೆ ಅಲ್ಲಿ ಸುಖವಿದೆ.
ಮಾವಿನ ಮರವೂ ಎಸೆದ ಕಲ್ಲಿನ ನೋವುಂಡರೂ ಸಿಹಿಯಾದ ಹಣ್ಣನ್ನೇ ಕೊಡುತ್ತದೆ. ಯಾರಿಗೂ ಸಾಧ್ಯವಾಗದ ರೀತಿಯಲ್ಲಿ ಪುಷ್ಪದಲ್ಲಿನ ಮಕರಂದವನ್ನು ಹೀರಿ ನಮಗೆ ಸಿಹಿಯಾದ ಜೇನುತುಪ್ಪ ನೀಡುತ್ತದೆ. ಹೀಗೆ ಜಗತ್ತು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಇದೆಲ್ಲವನ್ನು ಪರಿಗಣಿಸಿದರೆ, ಮನುಷ್ಯ ಮಾತ್ರ ಎಲ್ಲವೂ ತನಗೇ ಇರಬೇಕು ಎಂದು ಬಯಸುತ್ತಾನೆ. ತನಗೇ ಇದೆ ಎಂದು ಬಯಸುತ್ತಾನೆ. ನಿಸರ್ಗದಲ್ಲಿ ಒಂದು ಕೊರತೆಯಾದರೆ ಉಳಿದುದೆಲ್ಲ ಮುಕ್ಕು ಎಂದು ಕವಿ ಗೋಕಾಕರು ಹೇಳಿದ್ದಾರೆ.
ಸಂತೋಷದ ಕ್ಷಣಗಳು ಜೀವನದಲ್ಲಿ ಮಿಂಚಿ ಮರೆಯಾದಂತೆ ಬರುತ್ತವೆ ಹೋಗುತ್ತವೆ. ಆದರೆ ದುಃಖ ಸ್ಥಾಯಿಭಾವವನ್ನು ಕಾಯ್ದುಕೊಂಡೇ ಇರುತ್ತದೆ. ಕಾರಣ ಅತೃಪ್ತಿ ಮತ್ತು ಸಮಾಜ ಮತ್ತು ನಿಸರ್ಗದೊಂದಿಗೆ ನಾವು ನಮ್ಮ ಸ್ವಾರ್ಥವನ್ನು ಸಾಧಿಸುತ್ತಲಿದ್ದೇವೆ. ತೃಪ್ತಿಯಿಂದ ಇದ್ದವರ ನಾ ಕಾಣೆ ಎಂದೆನ್ನುವಂತೆ ಎಲ್ಲರೂ ಅತೃಪ್ತರೇ ಆಗಿದ್ದು ಭವ ಸುಖಕ್ಕಿಂತ ದುಃಖವನ್ನೆ ಹೆಚ್ಚು ಪಡೆಯತ್ತಲಿದ್ದೇವೆ.
ತೃಪ್ತಿಯಿಂದ ಇದ್ದವರು ಇಬ್ಬರೆ ಇಬ್ಬರು ಮುಕ್ತಿ ಪಡೆದವರು. ಮತ್ತು ಭಗವಂತ ನಿತ್ಯ ತೃಪ್ತರು. ಸಹನೆ ಕಳೆದುಕೊಂಡ ಕೇಡಿನ ಕೋಪಕ್ಕೆ ನೂಕುವ ಮುನ್ನ ಭಗವಂತ ಯಾವ ಸ್ಥಿತಿಯಲ್ಲಿ ನಮಗೆ ಇಟ್ಟಿದ್ದಾನೆ ಅದನ್ನೇ ಸಹರ್ಷಚಿತ್ತರಾಗಿ ಸ್ವೀಕರಿಸಿ ಅವನ ಕೃಪೆಗೆ ಪಾತ್ರರಾಗಬೇಕು. ಸೋಲುಗಳು ದುಃಖಗಳು ಸಮಾನವಾಗಿ ಸ್ವೀಕರಿಸುವ ಕಲೆಗಾರಿಕೆಯನ್ನು ಹೆಚ್ಚು ರೂಢಿಸಿಕೊಂಡಲ್ಲಿ ದುಃಖಕ್ಕಿಂತ ಸುಖದ ಸ್ಥಾಯಿಯನ್ನು ಹೆಚ್ಚಿಸಿಕೊಂಡಂತಾಗುವದು.