ಅವರ ಇಡೀ ಖಾಂದಾನ್‌ದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದ ತಿಗಡೇಸಿಗೆ ಅವರ ಮನೆತನದಲ್ಲಿ ದೊಡ್ಡ ಗೌರವ. ಮೂರನೇ ಚಾನ್ಸಿಗೆ ಪಾಸಾದಾಗ ಅವರಪ್ಪ ಊರತುಂಬ ಮೆರವಣಿಗೆ ಮಾಡಿ ಊರೂಟ ಹಾಕಿಸಿದ್ದ. ಕಾಲೇಜಿಗೆ ಹೋದ ಇಂದೇ ತಿಂಗಳಲ್ಲಿ ತಿಗಡೇಸಿ ಸ್ಟೈಲೇ ಬದಲಾಗಿತ್ತು. ಮೊದಲಾದರೆ ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕ್ರಾಪ್ ತೆಗೆದುಕೊಳ್ಳುತ್ತಿದ್ದ. ಈಗ ಶಾಂಪೂ ಹಾಕಿ ಕೂದಲನ್ನು ಹಾರಾಡಲು ಬಿಟ್ಟಿದ್ದ. ಊರಿಗೆ ಬಂದನೆಂದರೆ ಸಾಕು… ಜನರೆಲ್ಲ ಆತನನ್ನು ಬೆರಗು ಗಣ್ಣುಗಳಿಂದ ನೋಡುತ್ತಿದ್ದರು. ತನ್ನ ಹಳೆಯ ಕ್ಲಾಸ್ಮೆಟ್ಸ್ ಜತೆ ತನ್ನ ಕಾಲೇಜಿನ ಬಗ್ಗೆ ಹೇಳುತ್ತಿದ್ದ. ತಿಗಡೇಸಿ ಮಾತಿಗೆ ಎಲ್ಲರೂ ಮಂತ್ರ ಮುಗ್ದರಾಗುತ್ತಿದ್ದರು. ಆತನ ಪ್ಯಾಂಟು ಶರ್ಟುಗಳೂ ವಿಚಿತ್ರವಾಗಿರುತ್ತಿದ್ದವು. ಕಾಲೇಜಿನಲ್ಲಿ ಗೆಳೆಯರಿಗೆ ತಿಗಡೇಸಿಯೇ ದಿನಾಲು ಚಹ ಕುಡಿಸುತ್ತಿದ್ದ ಹಾಗಾಗಿ ಆತನನ್ನು ಬಿಟ್ಟಿರಲು ಯಾರೂ ಮನಸ್ಸು ಮಾಡುತ್ತಿರಲಿಲ್ಲ. ತರಗತಿಯಲ್ಲಿ ಪಾಠ ಮಾಡುವಾಗ… ಶಿಕ್ಷಕರು ತನ್ನನ್ನೇ ನೋಡಿ ಪಾಠ ಮಾಡಲಿ ಎಂದು ವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಬರುತ್ತಿದ್ದ. ಕೆಲ ಶಿಕ್ಷಕರು ಆತನನ್ನು ನೋಡಿ ಸುಮ್ಮನಾಗುತ್ತಿದ್ದರು. ಇದ್ಯಾವುದಿದು ಹುಡುಗ ಎಂದು ಪಡದಯ್ಯ ಮಾಸ್ತರ್.. ಒಂದು ದಿನ ತಿಗಡೇಸಿಯ ಅವತಾರ ನೋಡಿ…. ಎಲ್ಲರೆದರು… ಏನಯ್ಯ ಇದು ನಿನ್ನ ಅವತಾರ ಅಂದಾಗ.. ಸಾರ್ ಹೌದು ಸರ್ ಎಂದು ಖಡಕ್ ಆಗಿ ಉತ್ತರ ಕೊಟ್ಟ. ನೀನು ಅಭ್ಯಾಸದಲ್ಲಿ ತೋರಿಸು ನೋಡೋಣ ಹೀಗೆ ಹರಕಾ ಪ್ಯಾಂಟ್ ಹಾಕಿಕೊಂಡು ಸ್ಟೈಲ್ ಮಾಡುವುದಲ್ಲ ಎಂದು ಅಂದಾಗ… ಹೇಳಿಸಾರ್ ಏನು ಮಾಡಬೇಕು ಅಂತ ಕೇಳಿದ… ಅದಕ್ಕೆ ಪಡದಯ್ಯ ಮಾಸ್ತರ್ ಜೀನ್ಸ್…. ವಂಶವಾಹಿನಿ ಬಗ್ಗೆ ನಾಲ್ಕು ಲೈನು ಬೋರ್ಡ್ ಮೇಲೆ ಬರಿ ಬಾ ಅಂದರು. ಕೈಯಲ್ಲಿ ಚಾಕ್ ಪೀಸ್ ಹಿಡಿದು ಬೋರ್ಡ್ ಕಡೆಗೆ ಬಂದ ತಿಗಡೇಸಿ…
ನೋಡಿ.. ಜೀನ್ಸ್ಗೆ ತನ್ನದೇ ಆದ ಮಹತ್ವ ಇದೆ. ಕನ್ನಡದಲ್ಲಿ ಇದಕ್ಕೆ ವಂಶವಾಹಿನಿ ಎಂದು ಕರೆಯಲಾಗುತ್ತದೆ. ಜೀನ್ಸ್ ಮುಚ್ಚಿಡಲು ಸಾಧ್ಯವೇ ಇಲ್ಲ. ಫಾರ್ ಎಕ್ಸಾಂಪಲ್ ಅಂದರೆ ನಾನೇ…. ಹಿಂದಕ್ಕೆ ನಮ್ಮಪ್ಪ.. ನಮ್ಮ ತಾತಾ ಹರಕಾ ನಿಕ್ಕರ್ ಹಾಕುತ್ತಿದ್ದರು. ಈಗ ನಾನು ಹರಕಾ ಜೀನ್ಸ್ ಹಾಕುತ್ತಿದ್ದೇನೆ… ಅದೇ ಜೀನ್ಸ್ ತಂತಾನೆ ಬರುವ ಅಂಶ ಎಂದು ಬರೆದು ಬಂದ.