ಗೋಕಾಕ: ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಪಾರ ಮಳೆಯಿಂದ ಜನತೆಗೆ ತೊಂದರೆ ಉಂಟಾಗುತ್ತಿದ್ದರೂ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದರು.
ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಕೂಡ ಸರ್ಕಾರವಾಗಲಿ, ಸಚಿವರಾಗಲಿ ಜನತೆಗೆ ಸ್ಪಂದನೆ ನೀಡಲಿಲ್ಲ. ಈ ಬಾರಿಯೂ ನಿರ್ಲಕ್ಷ್ಯ ಮುಂದುವರೆದಿದೆ. ಕೆಲವು ಕಡೆ ಮಳೆಯಿಂದ ಮನೆಗಳು ಬಿದ್ದಿವೆ. ಕೆಲವರನ್ನು ಸ್ಥಳಾಂತರ ಮಾಡಲಾಗಿದ್ದು ಇನ್ನುಳಿದವರನ್ನು ಹಾಗೆ ಬಿಡಲಾಗಿದೆ ಎಂದು ಟೀಕಿಸಿದರು.
ಸಿಎಂ `ಧಮ್’ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಸತೀಶ್, ಸಿಎಂ ಅಬ್ಬರದ ಭಾಷಣ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಈಗಾಗಲೇ ನಮ್ಮ ನಾಯಕರು, ಮುಖಂಡರು ಸಿಎಂ ಹೇಳಿಕೆಗೆ ಉತ್ತರ ನೀಡಿದ್ದಾರೆ. ಬಿಜೆಪಿಯ ಜನಸ್ಪಂದನ ಕಾರ್ಯಕ್ರದಲ್ಲಿ ಅಷ್ಟೊಂದು ಜನ ಸೇರಿಲ್ಲ. ಖಾಲಿ ಕುರ್ಚಿಗಳು ಇರುವುದನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ ಎಂದು ವ್ಯಂಗ್ಯವಾಡಿದರು.
ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಈಗಾಗಲೇ ೨೦ ಜನವನ್ನು ಬಂಧಿಸಿದ್ದಾರೆ. ಬರೀ ಬಂಧನ ಮಾಡಿದರೆ ಪ್ರಯೋಜನ ಇಲ್ಲ. ದುಡ್ಡು ಕೊಟ್ಟು ನೌಕರಿ ಪಡೆಯುವ ಸ್ಥಿತಿ ನಿರ್ಮಾಣವಾದರೆ ನಿರಂತರ ಅಧ್ಯಯನ ಮಾಡಿದವರಿಗೆ ಅನ್ಯಾಯವಾಗುತ್ತೆ. ಕಾರಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಪ್ರಕರಣ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.