ಬಾಗಲಕೋಟೆ: ಕಾಂಗ್ರೆಸ್‌ನ 3ನೇ ಪಟ್ಟಿ ಬಿಡುಗಡೆಯಾದ ಹಿನ್ನಲೆಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಹೊಸ ಮುಖಕ್ಕೆ ಮಣೆ ಹಾಕಿರುವ ಪಕ್ಷವು ಸಿದ್ದು ಕೊಣ್ಣೂರಗೆ ಟಿಕೆಟ್ ನೀಡಿದೆ.
ಟಿಕೆಟ್ ನೀಡುತ್ತಿದ್ದಂತೆಯೇ ಕ್ಷೇತ್ರಾದ್ಯಂತ ಬಂಡಾಯದ ಕಹಳೆ ಭಾರಿ ಮಟ್ಟದಲ್ಲಿ ತಾರಕಕ್ಕೇರಿದ್ದು, ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ಎ.ಆರ್. ಬೆಳಗಲಿ ರಾಜೀನಾಮೆ ನೀಡುವುದಾಗಿ ಪತ್ರಿಕೆಗೆ ತಿಳಿಸಿದರು.
ಕ್ಷೇತ್ರಾದ್ಯಂತ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಹೊಗೆ ಭಾರಿ ಮಟ್ಟದಲ್ಲಿದ್ದು, ಬಿಜೆಪಿಯಷ್ಟೇ ಪ್ರಖರವಾಗಿ ಬಂಡಾಯ ಭುಗಿಲೆದ್ದಿದೆ. ಡಾ. ಬೆಳಗಲಿ ರಾಜೀನಾಮೆ ಹಿನ್ನಲೆಯಲ್ಲಿ ಇವರ ಮುಂದಿನ ನಡೆ ನಿಗೂಢವಾಗಿದ್ದು, ಟಿಕೆಟ್ ಆಕಾಂಕ್ಷಿಗಳೆಂದು ಗುರ್ತಿಸಿಕೊಂಡಿರುವ ಡಾ. ಪದ್ಮಜಿತ ನಾಡಗೌಡ ಪಾಟೀಲ, ಡಾ. ಎಂ.ಎಸ್. ದಡ್ಡೇನವರ ಸೇರಿದಂತೆ ಅನೇಕರೊಂದಿಗೆ ಮಹತ್ವದ ಸಭೆ ಸೇರಿ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.