ಜಿಮ್‌ನಲ್ಲಿ 5 ಲಕ್ಷ ಕೋಟಿ ಹೂಡಿಕೆ: ಸಚಿವ ನಿರಾಣಿ

ಮುರಗೇಶ ನಿರಾಣಿ
Advertisement

ಹುಬ್ಬಳ್ಳಿ: ಕಿತ್ತೂರು ಹಾಗೂ ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಅಲ್ಲದೇ, ಇನ್ನು ಹದಿನೆಂಟು ತಿಂಗಳುಗಳಲ್ಲಿ ಚಿಕ್ಕಮಗಳೂರು, ಬಾದಾಮಿ, ದಾವಣಗೆರೆ, ಕೊಪ್ಪಳ ಹಾಗೂ ರಾಯಚೂರಿನಲ್ಲಿ ನೂತನ ವಿಮಾನ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.
ನವೆಂಬರ್ ೨ರಿಂದ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹಿಂದೂಜಾ, ವೇದಾಂತ, ಅಂಬಾನಿ ಹಾಗೂ ಅದಾನಿ ಕಂಪನಿಗಳೂ ಸೇರಿ ವಿಶ್ವದ ಎಲ್ಲ ಪ್ರಮುಖ ಕಂಪನಿಗಳಿಂದ ಹೂಡಿಕೆಯ ಒಡಂಬಡಿಕೆ ಏರ್ಪಡಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ಆರ್.ನಿರಾಣಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್) 5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹೂಡಿಕೆ ಹರಿದುಬರಲಿದೆ. ಇದರಿಂದ ಕರ್ನಾಟಕದಲ್ಲಿ 5 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಜನೆಯಾಗಲಿದೆ ಎಂದು ವಿವರಿಸಿದರು.
ಬೆಂಗಳೂರು ಆಚೆ ಹೂಡಿಕೆ ಎನ್ನುವ ಎಲ್ಲರ ಕನಸು ನನಸಾಗಬೇಕಾದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಅವಶ್ಯ. ಆದ್ದರಿಂದ ಕಿತ್ತೂರು ಹಾಗೂ ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲೇಬೇಕು ಎಂಬ ಪಣ ತೊಟ್ಟಿದ್ದೇವೆ ಎಂದು ಸಚಿವರು ನುಡಿದರು.