ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯತ ಕಚೇರಿ ಮುಂದೆ ಗುತ್ತಿಗೆದಾರನೊಬ್ಬ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಅಶೋಕ ಚೌಗಲಾ ಎಂಬುವರೇ ಈ ಗುತ್ತಿಗೆದಾರನೆಂದು ತಿಳಿದುಬಂದಿದೆ. ಕರಗುಪ್ಪಿ ಗ್ರಾಮದಲ್ಲಿ ಎನ್ಆರ್‌ಇಜಿಯಡಿ 19 ಲಕ್ಷ ರೂ. ಮೌಲ್ಯದ ಕಾಮಗಾರಿ ನಡೆಸಿ ೫ ವರ್ಷ ಕಳೆದರೂ ಬಿಲ್ ಪಾವತಿಸಲು ಪಿಡಿಓ ಜಯಪ್ರಕಾಶ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗುರುಸಿದ್ದಪ್ಪ ಪಾಯನ್ನವರ ಮತ್ತಿತರ ಬಿಲ್ ಪಾಸ್ ಮಾಡಲು ಲಂಚ ಕೇಳುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆಯೆ ಬಿಲ್ ಪಾಸ್ ಮಾಡುವುದಕ್ಕೆ ತಾವು ಕಮೀಷನ್ ನೀಡಿದ್ದು, ಈಗ ಮತ್ತಷ್ಟು ಲಂಚ ಕೇಳುತ್ತಿದ್ದಾರೆ. ಮಾಡಿದ ಕೆಲಸಕ್ಕೆ ಬಿಲ್ ನೀಡದೆ ಸತಾಯಿಸುತ್ತಿದ್ದು, ತಮ್ಮ ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ ಎಂದು ಗುತ್ತಿಗೆದಾರ ಅಶೋಕ ಜಿಲ್ಲಾ ಪಂಚಾಯ್ತಿ ಸಿಇಓ ಹರ್ಷಲ್ ಬೋಯರ್ ಅವರ ಮುಂದೆ ಕಣ್ಣೀರಿಟ್ಟರು.
ನನಗಾದ ಸ್ಥಿತಿ ಇನ್ಯಾರಿಗೂ ಆಗೋದು ಬೇಡ. ನಾನು ಕುಟುಂಬ ಸಮೆತ ಆತ್ಮಹತ್ಯೆ ಮಾಡಿಕೊಳ್ಳುವೆ. ನಮಗೆ ಸತಾಯಿಸಿದವರಿಗೆ ಶಿಕ್ಷೆ ಕೊಡಿ ಎಂದು ಮನವಿ ಮಾಡಿದರು. ಈ ವೇಳೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ಥಳದಲ್ಲಿದ್ದ ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಚೌಗಲಾ ಅಲ್ಲಿಂದ ಕದಲದೆ ಪಿಡಿಓ ಅಮಾನತಿಗೆ ಒತ್ತಾಯಿಸಿದರು. ಕೊನೆಗೆ ಆತನ ಕೈಯಿಂದ ವಿಷದ ಬಾಟಲಿ ಕಸಿದುಕೊಂಡ ಪೊಲೀಸರು ಪ್ರತಿಭಟನೆ ಕುಳಿತ ಗುತ್ತಿಗೆದಾರ ಹಾಗೂ ಆತನ ಕುಟುಂಬವನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.