ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಸಮೀಕ್ಷೆ ವರದಿಯನ್ನು ಅಂಗೀಕರಿಸುವುದಾಗಿ ಪ್ರಕಟಿಸಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ಒಳಗೆ ಮತ್ತು ಹೊರಗೆ ರಾಜಕೀಯ ಸುಂಟರಗಾಳಿ ಏಳುವ ಸಾಧ್ಯತೆ ಇದೆ. ಮಾಡಿಕೊಂಡಂತೆ ಇದು ರಾಜಕೀಯ ಶಕ್ತಿಗಳ ಮರು ಧ್ರುವೀಕರಣಕ್ಕೆ ದಾರಿ ಮಾಡಿಕೊಡುವುದಲ್ಲದೆ ಜೇನುಗೂಡಿಗೆ ಕಲ್ಲು ಎಸೆದಂತಾಗಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದು ತಲ್ಲಣ ಮೂಡಿಸುವುದಂತೂ ನಿಶ್ಚಿತ. ಮುಂಬರುವ ಬಿಬಿಎಂಪಿ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭೆ ಚುನಾವಣೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ೮ ವರ್ಷಗಳ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ೨೦೧೫ ರಲ್ಲಿ ಹಿಂದುಳಿದ ಜಾತಿಗಳ ಸಮೀಕ್ಷೆ ನಡೆಯಿತು. ಆಗ ಇದನ್ನು ಜಾರಿಗೆ ತರಲು ಆಗಲಿಲ್ಲ. ಈಗ ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ ಈ ಸಮೀಕ್ಷೆಯನ್ನು ಅನುಷ್ಠಾನಕ್ಕೆ ತರಲು ತೀರ್ಮಾನಿಸಿರುವುದು ರಾಜಕೀಯ ಲೆಕ್ಕಾಚಾರವೇ ಬೇರೆ ಇದ್ದಂತೆ ಕಂಡು ಬರುತ್ತಿದೆ. ಅದರಲ್ಲೂ ದೇವರಾಜ ಅರಸು ಅವರನ್ನು ನೆನಪಿಸಿಕೊಂಡು ಜಾತಿ ಸಮೀಕ್ಷೆಯನ್ನು ಪ್ರಸ್ತಾಪಿಸಿದ್ದಾರೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಯಾವುದನ್ನು ಜಾರಿಗೆ ತರಲು ಪ್ರಯತ್ನಿಸಿ ವಿಫಲರಾದರೋ ಅದನ್ನು ಸಿದ್ದರಾಮಯ್ಯ ಪೂರ್ಣಗೊಳಿಸುವ ಆಲೋಚನೆಯಲ್ಲಿರುವಂತಿದೆ. ರಾಜಕೀಯ ಪಕ್ಷಗಳನ್ನು ಬದಲಿಸಿದರೂ ಸಿದ್ದರಾಮಯ್ಯ ತಮ್ಮ ಅಹಿಂದ ವಾದವನ್ನು ಕೈಬಿಟ್ಟಿಲ್ಲ. ಸಿದ್ದರಾಮಯ್ಯ ನಂತರ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾದರೂ ಜಾತಿ ಸಮೀಕ್ಷೆಯನ್ನು ಅನುಷ್ಠಾನಕ್ಕೆ ತರಲು ಯತ್ನಿಸಲಿಲ್ಲ. ಸಿದ್ದರಾಮಯ್ಯ ಕೂಡ ೫ ಗ್ಯಾರಂಟಿಗಳ ಬಗ್ಗೆ ಚುನಾವಣೆ ಕಾಲದಲ್ಲಿ ಪ್ರಸ್ತಾಪಿಸಿದ್ದರೇ ಹೊರತು ಜಾತಿ ಸಮೀಕ್ಷೆ ಬಗ್ಗೆ ಚಕಾರ ಎತ್ತಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಜಾತಿ ಸಮೀಕ್ಷೆ ಮುನ್ನೆಲೆಗೆ ಬಂದಿದೆ.
ಇದುವರೆಗೆ ನಮ್ಮಲ್ಲಿ ವರ್ಗ ಮೀಸಲಾತಿ ಮಾತ್ರ ಇದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಜಾತಿ ಆಧಾರಿತ ಮೀಸಲಾತಿ ಸಂವಿಧಾನಬದ್ಧವಾಗಿದೆ. ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾತಿ ಸವಲತ್ತು ಕಲ್ಪಿಸಲಾಗಿದೆ. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ದ್ವಾರಕಾನಾಥ್ ಮತ್ತು ಎಚ್. ಕಾಂತರಾಜು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ಅವರ ಕಾಲದಲ್ಲಿ ನೀಡಿದ್ದ ವರದಿಯನ್ನು ನಂತರ ಬಂದ ಸರ್ಕಾರಗಳು ಪರಿಗಣಿಸಲಿಲ್ಲ. ಬಿಜೆಪಿ ಸರ್ಕಾರ ಹೊಸದಾಗಿ ಜೈಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಮತ್ತೊಂದು ಹಿಂದುಳಿದ ವರ್ಗಗಳ ಆಯೋಗ ರಚಿಸಿತು. ಅದು ತಾತ್ಕಾಲಿಕ ವರದಿ ನೀಡಿದೆಯೇ ಹೊರತು ಇನ್ನೂ ಪೂರ್ಣ ವರದಿ ನೀಡಿಲ್ಲ.
ಏಪ್ರಿಲ್ ೧೧ ರಿಂದ ೩೦, ೨೦೧೫ರವರೆಗೆ ನಡೆದ ಜಾತಿ ಸಮೀಕ್ಷೆಯಲ್ಲಿ ೧.೬ ಕೋಟಿ ಕುಟುಂಬಗಳು ಪಾಲ್ಗೊಂಡಿದ್ದವು. ೧.೬ ಲಕ್ಷ ಸಿಬ್ಬಂದಿ ಈ ಬೃಹತ್ ಕಾರ್ಯ ಕೈಗೊಂಡಿದ್ದರು. ಬಿಇಎಲ್ ಸಮೀಕ್ಷೆಯ ಡಿಜಟಲೀಕರಣ ಕೈಗೊಂಡಿತ್ತು. ೧೯೩೫ ರಿಂದ ಜಾತಿ ಸಮೀಕ್ಷೆ ನಡೆದಿರಲಿಲ್ಲ. ಈ ಸಮೀಕ್ಷೆಯ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಈಗ ಲಭ್ಯವಿರುವ ಮಾಹಿತಿಯಂತೆ ಪರಿಶಿಷ್ಟ ಜಾತಿ ೧.೧ ಕೋಟಿ, ಮುಸ್ಲಿಮರು ೭೫ ಲಕ್ಷ, ಲಿಂಗಾಯತರು ೯೯ ಲಕ್ಷ, ಒಕ್ಕಲಿಗರು ೪೯ ಲಕ್ಷ, ಕುರುಬರು ೪೩ ಲಕ್ಷ, ಪರಿಶಿಷ್ಟ ಪಂಗಡ ೪೨ ಲಕ್ಷ, ಬ್ರಾಹ್ಮಣರು ೧೩ ಲಕ್ಷ ಇದ್ದಾರೆ ಎಂದು ತಿಳಿದುಬಂದಿದೆ. ಇದು ಸಮೀಕ್ಷೆ ಬಹಿರಂಗಗೊಂಡ ಮೇಲೆ ಖಚಿತಗೊಳ್ಳಬೇಕಿದೆ. ಸಮೀಕ್ಷೆಯಿಂದ ೧೯೨ ಹೊಸ ಜಾತಿ, ಒಟ್ಟು ೧೩೫೧ ಜಾತಿಗಳು ಇರುವುದು ಕಂಡು ಬಂದಿದೆ. ೬ ಕೋಟಿ ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಅತಿ ಕಡಿಮೆ ಜನಸಂಖ್ಯೆ ಇರುವ ಜಾತಿಗಳು ೮೦ ಇವೆ. ಹಿಂದುಳಿದ ವರ್ಗಗಳಲ್ಲಿ ೮೧೬ ಜಾತಿ ಕಂಡು ಬಂದಿವೆ.ಈ ಅಂಕಿಅಂಶಗಳು ಸಮೀಕ್ಷೆ ಬಹಿರಂಗಗೊಂಡ ಮೇಲೆ ಮಹತ್ವ ಪಡೆಯಲಿದೆ. ಇದುವರೆಗೆ ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಜಾತಿಗಳು ಹಿಂದೆ ಸರಿದು ದಲಿತರು, ಮುಸ್ಲಿಮರು ಹೆಚ್ಚಿನ ಸ್ಥಾನಮಾನ ಬಿಟ್ಟುಕೊಡಬೇಕು. ಇದಕ್ಕೆ ಇಡೀ ಸಮಾಜ ಒಪ್ಪಿಗೆ ನೀಡಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಬದಲಾಗಲಿದೆ. ಇದಕ್ಕೆ ಅನುಗುಣವಾಗಿ ರಾಜಕೀಯ ಬಲಾಬಲವೂ ಬದಲಾಗಲಿದೆ. ಈಗ ಎಲ್ಲ ರಾಜಕೀಯ ಪಕ್ಷಗಳಲ್ಲಿ ಪ್ರಬಲವಾಗಿರುವ ಜಾತಿಗಳು ತಮ್ಮ ಅಧಿಕಾರವನ್ನು ಬೇರೆ ಜಾತಿಗಳಿಗೆ ಬಿಟ್ಟುಕೊಡಲು ಸಿದ್ಧರಾಗಬೇಕು. ಆರ್ಥಿಕ- ಸಾಮಾಜಿಕ ಬದಲಾವಣೆಗಳು ಅಷ್ಟು ಸುಲಭವಾಗಿ ಬರುವುದಿಲ್ಲ. ಕರ್ನಾಟಕದ ರಾಜಕೀಯ ಇತಿಹಾಸವನ್ನು ನೋಡಿದರೆ ಇಂದಿನ ಚಿತ್ರಣದಲ್ಲಿ ಬದಲಾವಣೆ ತರುವುದು ಎಂದರೆ ದುಸ್ಸಾಹಸವೇ ಸರಿ. ಇದಕ್ಕೆ ಸಿದ್ದರಾಮಯ್ಯ ರಾಜಕೀಯವಾಗಿ ಸಿದ್ದರಾಗಿದ್ದಾರೆಯೇ? ಅವರ ಪಕ್ಷ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಸಿದ್ಧವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸಿದ್ದರಾಮಯ್ಯ ಮಾತ್ರ ಅಹಿಂದ ವಾದವನ್ನು ಬಲವಾಗಿ ನಂಬಿರುವುದಂತೂ ಖಚಿತ.