ಜಾತಿಯಾಧಾರಿತ ದೌರ್ಜನ್ಯ ನಿಲ್ಲಲಿ

Advertisement

ಜಾತಿ ಎಂಬುದು ಹುಟ್ಟಿನಿಂದ ಬಂದಿದ್ದು ಎಂದು ಸ್ವೀಕರಿಸಬಾರದು. ಅದು ನಡತೆ ಮತ್ತು ಸಂಸ್ಕಾರದಿಂದ ಬಂದದ್ದಾಗಿದೆ ಯಾರಿಗೆ ಸುಜ್ಞಾನವಿರುತ್ತದೆಯೋ, ಸದಾಚಾರವಿರುತ್ತದೆಯೋ ಅದುವೆ ದೇವನೊಲಿಸುವ ವಿಧಾನ. ಇಲ್ಲಿ ದೇವನೆಂದರೇ ಶರಣರು ನಂಬಿದ ದೇವರೇ ಹೊರತು, ಉದ್ಭವಮೂರ್ತಿಗಳಲ್ಲ ಇದನ್ನೇ ಸರ್ವಜ್ಞರು ತಮ್ಮ ವಚನದಲ್ಲಿ ತಿಳಿಸಿದ್ದಾರೆ ಇದನ್ನು ಅರ್ಥೈಸಿಕೊಂಡವರು ದೇವನೊಲಿದಾತನಾಗುತ್ತಾನೆ. ಇದೇ ವಾರ ರಾಮನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ದೇವರ ಆರತಿ ತಟ್ಟೆ ಮುಟ್ಟಿದನೆಂಬ ಕಾರಣಕ್ಕೆ ಗುರು ಸ್ಥಾನದಲ್ಲಿದ್ದ ಶಿಕ್ಷಕನಿಗೆ ಹಲ್ಲೆ ಮಾಡಲಾಗಿದೆ, ಶಿಕ್ಷಕನು ದಲಿತ( ಪರಿಶಿಷ್ಟ)ನೆಂಬ ಒಂದೇ ಕಾರಣಕ್ಕೆ ಈ ಕೃತ್ಯ ನಡೆದಿದೆ. ಶಾಲೆಯೊಳಗೆ ಆತ ಎಲ್ಲಾ ವರ್ಗ/ ಧರ್ಮದವರಿಗೂ ಸಮಾನ ಶಿಕ್ಷಣ ಬೋಧಿಸುವ ಗುರು ಸ್ಥಾನದಲ್ಲಿದ್ದರೂ, ಸಾಮಾಜಿಕ ವ್ಯವಸ್ಥೆಯಲ್ಲಿ ಆತ ಜಾತಿಯಲ್ಲಿ ಹಿಂದುಳಿದವರು. ಕಳೆದ ವರ್ಷ ಕೋಲಾರದ ಮಾಲೂರಿನಲ್ಲಿ ದೇವರ ಗುಜ್ಜುಕೋಲು ಸ್ಪರ್ಶಿಸಿದ್ದಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಬಾಲಕನಿಗೆ ೬೦ ಸಾವಿರ ರೂಪಾಯಿ ದಂಡ ವಿಧಿಸಿದ ಪ್ರಕರಣ ನಡೆದಿತ್ತು. ಪರಿಶಿಷ್ಟ ಜಾತಿ/ಪಂಗಡಗಳ ಮೇಲೆ ಈ ರೀತಿಯಾಗಿ ನಡೆಯುವ ಜಾತಿಯಾಧಾರಿತ ದೌರ್ಜನ್ಯಗಳು ಅತಿ ಹೆಚ್ಚು ನಡೆಯುವುದು ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಲ್ಲಿ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಪ್ರತಿ ವರ್ಷ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತವೆ. ಅಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆಯೆಂದರೆ ಅಷ್ಟೇನೂ ಆಶ್ಚರ್ಯವಾಗುವುದಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಜಾತಿ ತಾರತಮ್ಯ ಪ್ರಕರಣಗಳು ನಡೆಯುತ್ತಿವೆ ಎಂದರೆ ನೋವಿನ ಸಂಗತಿಯಾಗುತ್ತದೆ. ಯಾಕೆಂದರೆ ಇಲ್ಲಿ ಸರ್ವಜ್ಞ, ಬಸವಣ್ಣ, ಕನಕ ರಾದಿಯಾಗಿ ಅನೇಕ ಶರಣ-ಶರಣೆಯರು ಹುಟ್ಟಿ ಬಂದಿದ್ದಾರೆ, ಈ ಎಲ್ಲರೂ ಜಾತಿ ಅಸಮಾನತೆಯನ್ನು ನಿವಾರಿಸಿ, ಸಮಾನತೆಯ ಸಮಾಜವನ್ನು ಕಟ್ಟಲು ಹೊರಟವರು. ಇಂತಹ ದಾರ್ಶನಿಕರು ಹುಟ್ಟಿದ ನಾಡಿನಲ್ಲಿ ಜಾತಿ ತಾರತಮ್ಯದ ಪ್ರಕರಣಗಳು ನಡೆಯುತ್ತವೆಂದರೆ ಅದು ಶೋಷಿತರಿಗೆ ಮಾಡಿದ ಅವಮಾನವಲ್ಲ, ಬದಲಾಗಿ ಈ ನಾಡಿನಲ್ಲಿ ಜನಿಸಿದ ದಾರ್ಶನಿಕರಿಗೆ ಮಾಡಿದ ಅವಮಾನ. ಜಾತಿಯಲ್ಲಿ ಉತ್ತಮರೆಂದು ತಮಗೆ ತಾವೇ ಶ್ರೇಷ್ಠರೆಂದುಕೊಳ್ಳುವವರು ಇದನ್ನು ಅರ್ಥೈಸಿಕೊಂಡರೇ ಒಳಿತು. ದೇಶದಲ್ಲಿ ಹೆಚ್ಚುತ್ತಿರುವ ಮತಾಂತರದ ಹಾವಳಿಯಿಂದ ನಮ್ಮವರೇ ನಮ್ಮ ಧರ್ಮವನ್ನು ಧಿಕ್ಕರಿಸುತ್ತಿರುವುದು ತಿಳಿದರೂ ಕೂಡ, ನಮ್ಮ ಜನ ಜಾತಿ ತಾರತಮ್ಯಗಳನ್ನು ನಿಲ್ಲಿಸುತ್ತಿಲ್ಲ ಎಂದರೆ ಹೇಗೆ?
ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಎಂಬ ಕನಕದಾಸರ ದಿಟ್ಟತನದ ಮಾತುಗಳನ್ನು ನೆನಪಿಸಿಕೊಳ್ಳಿ. ಮುಂದಾದರೂ ನಾವೆಲ್ಲರೂ ಒಂದೇ ಎಂಬ ಭಾವನೆಗಳನ್ನು ರೂಢಿಸಿಕೊಳ್ಳಿ. ಆರತಿ ತಟ್ಟೆಯಲ್ಲಿ ಉರಿಯುವ ಬೆಂಕಿಗೇ ಇಲ್ಲದ ಜಾತಿ ನಿಮಗೇಕೆ ?