ಸಿನಿಮಾ: ಜಸ್ಟ್ ಪಾಸ್
ನಿರ್ದೇಶನ: ಕೆ.ಎಂ.ರಘು
ತಾರಾಗಣ: ಶ್ರೀ ಮಹಾದೇವ್, ಪ್ರಣತಿ, ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ಗೋವಿಂದೇ ಗೌಡ ಮೊದಲಾದವರು.
ರೇಟಿಂಗ್ಸ್: 3
-ಜಿ.ಆರ್.ಬಿ
ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆಯುವ ಅನೇಕ ಕಥೆಗಳು ಈಗಾಗಲೇ ಬಂದು ಹೋಗಿವೆ. ಆದರೆ ಜಸ್ಟ್ ಪಾಸ್ ಆದವರ ಕಥೆ-ವ್ಯಥೆಗಳನ್ನು ಒಂದೇ ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಘು. ಕಾಲೇಜು ಎಂದಮೇಲೆ ತರಲೆ-ತುಂಟಾಟ ಇದ್ದದ್ದೇ. ಓದಿಗಿಂತ ಪಠ್ಯೇತರ ಚಟುವಟಿಕೆಗಳೇ ಹೆಚ್ಚು. ಹೀಗಿರುವಾಗ ಜಸ್ಟ್ ಪಾಸ್ ಆದವರಿಗೆಂದೇ ತೆರೆಯುವ ಕಾಲೇಜು ಹೇಗಿರಬೇಡ. ಅಂಥ ಹುಡುಗರನ್ನು ಫಸ್ಟ್ ಕ್ಲಾಸ್ ಮಾಡಲು ಪಣ ತೊಡುವ ಪ್ರನ್ಸಿಪಾಲ್ ದಳವಾಯಿ (ರಂಗಾಯಣ ರಘು) ಕನಸು ಈಡೇರುತ್ತಾ ಎಂಬುದರ ಸುತ್ತ ಸಾಗುವ ಕಥೆಯಲ್ಲಿ ಅನೇಕ ತಿರುವುಗಳಿವೆ. ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಲು ಬರುವ ಶಿಕ್ಷಣ ಸಚಿವ, ಪೊಲೀಸರು, ರೌಡಿಗಳು… ಹೀಗೆ ಅನೇಕ ವಿಷಯಗಳನ್ನು ಒಂದೇ ಸಿನಿಮಾದಲ್ಲಿ ಬಿಚ್ಚಿಡಲಾಗಿದೆ.
ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಎಷ್ಟರಮಟ್ಟಿಗೆ ನ್ಯಾಯ ಸಿಗುತ್ತಿದೆ ಎಂಬುದರ ಸುತ್ತ ಬೆಳಕು ಚೆಲ್ಲಲಾಗಿದೆ. ಒಂದು ಕಾಲೇಜು ಉತ್ತಮ ಮಟ್ಟದ ಶಿಕ್ಷಣ ಕೊಡುತ್ತಿದೆ, ಅಲ್ಲಿನ ವಿದ್ಯಾರ್ಥಿಗಳೆಲ್ಲ ಹೆಚ್ಚು ಹೆಚ್ಚು ಅಂಕ ಗಳಿಸುತ್ತಿದ್ದಾರೆ ಎಂದಕೂಡಲೇ ಹಲವರ ಕಣ್ಣು ಕೆಂಪಾಗುತ್ತದೆ. ಅದನ್ನು ಹೇಗಾದರೂ ಮಾಡಿ ಹಾಳು ಮಾಡಬೇಕು ಎಂಬ ಸಂಚು ರೂಪಿಸುವ ಬಳಗ, ಅದಕ್ಕೆ ಕುಮ್ಮಕ್ಕು ಕೊಡುವ ಸಮಾಜದ ಅನೇಕ ತಲೆಗಳು… ಇಂಥ ಸಮಸ್ಯೆಗಳನ್ನೆಲ್ಲ ಮೆಟ್ಟಿ ನಿಂತು ಜಸ್ಟ್ ಪಾಸ್ ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಗೈದು ಕೀರ್ತಿಪತಾಕೆ ಹಾರಿಸುತ್ತಾರಾ ಎಂಬುದೇ ಪ್ರಮುಖ ಘಟ್ಟ. ಈ ನಡುವೆ ಪ್ರೀತಿ, ತಮಾಷೆಗಳಿಗೂ ಜಾಗ ಮಾಡಿಕೊಡಲಾಗಿದೆ.
ಶ್ರೀ ಮಹಾದೇವ್, ಪ್ರಣತಿ ಪ್ರೇಮಿಗಳಾಗಿ, ವಿದ್ಯಾರ್ಥಿಗಳಾಗಿ ಪೂರ್ಣ ಅಂಕ ಗಳಿಸಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ಗೋವಿಂದೇ ಗೌಡ ಮೊದಲಾದವರು ಸಿನಿಮಾದುದ್ದಕ್ಕೂ ನಗಿಸುತ್ತಾ, ಕಣ್ಣಂಚಲಿ ನೀರು ಜಿನುಗುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಕೆ.ಎಂ.ರಘು ಹಾಗೂ ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿದೆ. ಹರ್ಷವರ್ಧನ್ ಹಾಡುಗಳು ಗುನುಗುವಂತಿದೆ.